ಚೀನಾದ ಶೋಧ ನೌಕೆಯಿಂದ ಮಂಗಳ ಗ್ರಹದ ಚಿತ್ರ ರವಾನೆ

Update: 2021-02-06 17:32 GMT

ಬೀಜಿಂಗ್ (ಚೀನಾ), ಫೆ. 6: ಚೀನಾದ ತಿಯಾನ್‌ವೆನ್-1 ಶೋಧ ನೌಕೆಯು ಮಂಗಳ ಗ್ರಹದ ಮೊದಲ ಚಿತ್ರವನ್ನು ಭೂಮಿಗೆ ಕಳುಹಿಸಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಶೋಧ ನೌಕೆಯು ಈ ವರ್ಷದ ಉತ್ತರಾರ್ಧದಲ್ಲಿ ಕೆಂಪು ಗ್ರಹದಲ್ಲಿ ಇಳಿಯಲಿದೆ.

ಕಳೆದ ವರ್ಷದ ಜುಲೈಯಲ್ಲಿ ಶೋಧ ನೌಕೆಯನ್ನು ಮಂಗಳ ಗ್ರಹದತ್ತ ಉಡಾಯಿಸಲಾಗಿದ್ದು, ಅದು ಫೆಬ್ರವರಿ 10ರ ಸುಮಾರಿಗೆ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಚೀನಾ ನ್ಯಾಶನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ಸಿಎನ್‌ಎಸ್‌ಎ) ಶುಕ್ರವಾರ ರಾತ್ರಿ ಮಂಗಳ ಗ್ರಹದ ಕಪ್ಪು-ಬಿಳುಪು ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಶಿಯಾಪರೇಲಿ ಕುಳಿ ಮತ್ತು ವ್ಯಾಲಿಸ್ ಮರಿನರೀಸ್ ಸೇರಿದಂತೆ ಗ್ರಹದ ಮೇಲ್ಭಾಗದ ಭೌಗೋಳಿಕ ಲಕ್ಷಣಗಳನ್ನು ಚಿತ್ರ ಬಿಂಬಿಸಿದೆ.

ಚಿತ್ರವನ್ನು ಮಂಗಳ ಗ್ರಹದಿಂದ ಸುಮಾರು 22 ಲಕ್ಷ ಕಿಲೋಮೀಟರ್ ದೂರದಿಂದ ತೆಗೆಯಲಾಗಿದೆ ಎಂದು ಸಿಎನ್‌ಎಸ್‌ಎ ಹೇಳಿದೆ. ಶೋಧ ನೌಕೆಯು ಈಗ ಗ್ರಹದಿಂದ 11 ಲಕ್ಷ ಕಿಲೋಮೀಟರ್ ದೂರದಲ್ಲಿದೆ ಎಂದು ಅದು ತಿಳಿಸಿದೆ.

5,000 ಕೆಜಿ ಭಾರದ ತಿಯಾನ್‌ವೆನ್-1 ಶೋಧ ನೌಕೆಯು ಒಂದು ಆರ್ಬಿಟರ್, ಒಂದು ಲ್ಯಾಂಡರ್ ಮತ್ತು ಮತ್ತು ಒಂದು ರೋವರ್ ಒಳಗೊಂಡಿದೆ. ರೋವರ್ ಮಂಗಳ ಗ್ರಹದ ಮಣ್ಣಿನ ಅಧ್ಯಯನ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News