ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ

Update: 2021-02-06 17:54 GMT

ಯಾಂಗನ್ (ಮ್ಯಾನ್ಮಾರ್), ಫೆ. 6: ಈ ವಾರದ ಆದಿ ಭಾಗದಲ್ಲಿ ನಡೆದ ಸೇನಾ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ಮ್ಯಾನ್ಮಾರ್ ರಾಜಧಾನಿ ಯಾಂಗನ್‌ನಲ್ಲಿ ಶನಿವಾರ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು ಹಾಗೂ ಚುನಾಯಿತ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಬಿಡುಗಡೆ ಮಾಡುವಂತೆ ಜನರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಈ ಅವಧಿಯಲ್ಲಿ ದೇಶದ ಸೇನಾಡಳಿತವು ದೇಶಾದ್ಯಂತ ಇಂಟರ್‌ನೆಟ್ ಸ್ಥಗಿತಗೊಳಿಸಿತು.

‘‘ಸೇನಾ ಸರ್ವಾಧಿಕಾರಿಗೆ ಸೋಲು ಸೋಲು; ಪ್ರಜಾಪ್ರಭುತ್ವಕ್ಕೆ ಗೆಲುವು ಗೆಲುವು’’ ಎಂಬುದಾಗಿ ಪ್ರತಿಭಟನಕಾರರು ಘೋಷಣೆ ಕೂಗಿದರು. ‘ಸೇನಾ ಸರ್ವಾಧಿಕಾರದ ವಿರುದ್ಧ’ ಎಂದು ಬರೆದಿರುವ ಫಲಕಗಳನ್ನು ಅವರು ಪ್ರದರ್ಶಿಸಿದರು.

ಹೆಚ್ಚಿನ ಪ್ರತಿಭಟನಕಾರರು ಸೂ ಕಿಯ ಪಕ್ಷ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯ ಬಣ್ಣವಾಗಿರುವ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದರು.

ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಭಾರೀ ಬಹುಮತವನ್ನು ಪಡೆದಿತ್ತು. ಆದರೆ, ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಫಲಿತಾಂಶವನ್ನು ಸ್ವೀಕರಿಸಲು ಸೇನೆ ನಿರಾಕರಿಸಿತ್ತು.

ಇಂಟರ್‌ನೆಟ್ ಸ್ಥಗಿತ

ಪ್ರತಿಭಟನೆ ಆರಂಭಗೊಂಡ ಬಳಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರೊಂದಿಗೆ ಸೇರಿಕೊಂಡರು. ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಹೋರಾಟಗಾರರು ಜನರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಕರೆ ನೀಡುತ್ತಿರುವಂತೆಯೇ, ದೇಶಾದ್ಯಂತ ಇಂಟರ್‌ನೆಟ್ ಸ್ಥಗಿತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News