×
Ad

ಕೃಷಿ ಕಾಯ್ದೆ ವಿವಾದ: ಕೇಂದ್ರದ ವಿರುದ್ಧ ಪವಾರ್ ವಾಗ್ದಾಳಿ

Update: 2021-02-07 09:33 IST

ಮುಂಬೈ, ಫೆ.7: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು 70 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಥವಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಧ್ಯಪ್ರವೇಶದಿಂದಷ್ಟೇ ನನೆಗುದಿಗೆ ಬಿದ್ದಿರುವ ಈ ಸಮಸ್ಯೆಗೆ ಪರಿಹಾರ ಸೂತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.

ರೈತ ಪ್ರತಿಭಟನೆಯನ್ನು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ ಅವರು, ಕೇಂದ್ರ ಸರಕಾರ ರೈತರ ಪ್ರತಿಭಟನೆ ವಿರುದ್ಧ ಕೈಗೊಂಡ ವಿಪರೀತ ಕ್ರಮಗಳು ದೇಶದಲ್ಲಿ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಹಿಂದೆಂದೂ ಕಂಡಿಲ್ಲ ಎಂದು ವಿಶ್ಲೇಷಿಸಿದರು.

"ನನ್ನ ಪ್ರಕಾರ ಕೇಂದ್ರ ಸರಕಾರ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಹಾಗೂ ಉನ್ನತ ಮಟ್ಟದ ಸಚಿವರು ಮಧ್ಯಪ್ರವೇಶಿಸಬೇಕು. ನರೇಂದ್ರ ಸಿಂಗ್ ಥೋಮರ್‌ಗೆ ಅಗೌರವ ತೋರಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರಧಾನಿ ಅಥವಾ ರಕ್ಷಣಾ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇದಾದಲ್ಲಿ, ಪ್ರತಿಭಟನೆ ನೇತೃತ್ವ ವಹಿಸುತ್ತಿರುವವರು ಕೂಡಾ ಪರಿಹಾರದತ್ತ ಚಿಂತಿಸುತ್ತಾರೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

"ಪ್ರತಿಭಟನೆ ತಡೆಯಲು ರಸ್ತೆಗಳಿಗೆ ಮೊಳೆ ಅಳವಡಿಸಲಾಗಿದೆ. ಸ್ವಾತಂತ್ರ್ಯ ಬಳಿಕ ಇಂಥ ಕ್ರಮ ಕೈಗೊಂಡ ನಿದರ್ಶನ ಇಲ್ಲ. ಸರಕಾರ ವೈಪರೀತ್ಯ ಕ್ರಮಗಳನ್ನು ಕೈಗೊಂಡಿದ್ದು, ಇದು ಅವರ ಪ್ರವೃತ್ತಿಯನ್ನು ತೋರಿಸುತ್ತದೆ. ರೈತರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದಾಗ ಸರಕಾರ ಸಮಾಧಾನ ಪ್ರದರ್ಶಿಸಬೇಕಿತ್ತು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News