ಕೋಟ: 2 ಬೈಕ್ ಗಳು ನಡುವೆ ಢಿಕ್ಕಿ; ನಾಲ್ವರಿಗೆ ಗಂಭೀರ ಗಾಯ
ಕೋಟ, ಫೆ.7: ಎರಡು ಬೈಕುಗಳ ನಡುವೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಕೋಟ ಮಣೂರು ಪಡುಕೆರೆಯ ಗೋವಾನ್ ಫ್ಯಾಕ್ಟರಿಯ ಸಮೀಪ ರವಿವಾರ ಮುಂಜಾವ ಸಂಭವಿಸಿರುವುದು ವರದಿಯಾಗಿದೆ.
ಕೋಟ ಪಡುಕೆರೆಯ ಮಣೂರು ನಿವಾಸಿಗಳಾದ ಮಿಥುನ್(28), ರಾಕೇಶ್(28), ಹರೀಶ್(29) ಹಾಗೂ ಸುಭಾಸ್(26) ಗಾಯಗೊಂಡರು. ಇವರು ಬೀಜಾಡಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ತೆರಳಿ ಕಳೆದ ರಾತ್ರಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ನಾಲ್ವರು ಸಂಚರಿಸುತ್ತಿದ್ದ ಎರಡು ಬೈಕುಗಳು ಗೋವಾನ್ ಫ್ಯಾಕ್ಟರಿಯ ಸಮೀಪ ರವಿವಾರ ಮುಂಜಾವ 1:30ರ ಸುಮಾರಿಗೆ ಪರಸ್ಪರ ಢಿಕ್ಕಿಯಾಗಿದ್ದು, ಇದರಿಂದ ನಿಯಂತ್ರಣ ತಪ್ಪಿದ ಬೈಕ್ ಗಳು ಪಕ್ಕದಲ್ಲಿರುವ ಮನೆಯೊಂದರ ಕಂಪೌಂಡ್ ಗೋಡೆಗೆ ಬಡಿದಿದೆ. ಇದರಿಂದ ಎರಡು ಬೈಕಿನ ಸವಾರರು ಕಾಂಪೌಂಡಿನ ಒಳಗಡೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು ಜೀವನ್ ಮಿತ್ರ ಆಂಬುಲೆನ್ಸ್ ನ ನಾಗರಾಜ ಪುತ್ರನ್ ಕೋಟ ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಕೋಟ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.