ಡೆತ್‌ ನೋಟ್‌ ಬರೆದಿಟ್ಟು ಪ್ರತಿಭಟನಾ ಸ್ಥಳದಲ್ಲಿ ಆತ್ಮಹತ್ಯೆಗೈದ ರೈತ

Update: 2021-02-07 08:31 GMT

ಟಿಕ್ರಿ ಗಡಿಯಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಿಂದ್‌ನ 52 ವರ್ಷದ ರೈತ ಶನಿವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾಗಿ indianexpress.com ವರದಿ ಮಾಡಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ಕರಮ್‌ವೀರ್ ಸಿಂಗ್, ಟಿಕ್ರಿ ಗಡಿಯ ಸಮೀಪ ಉದ್ಯಾನವನವೊಂದರ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅವರು ಜಿಂದ್‌ನ ಸಿಂಗ್ವಾಲ್ ಗ್ರಾಮದ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ.

"ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಈ ವ್ಯಕ್ತಿಯು ನಾವು ಸ್ಥಳಕ್ಕೆ ತೆರಳಿದಾಗಲೇ ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಬಳಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದೆ. ಅವರ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದೆ. ಅವರ ಕುಟುಂಬಸ್ಥರು ಬಂದು ಅವರ ಒಪ್ಪಿಗೆ ನೀಡಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಇದುವರೆಗೆ ತನಿಖೆಯಲ್ಲಿ ಯಾವುದೇ ಸಂಶಯಗಳು ಮೂಡಿಲ್ಲ” ಎಂದು ಬಹದ್ದೂರ್‌ ಘರ್‌ ಸಿಟಿ ಪೊಲೀಸ್‌ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಹೇಳಿದರು. 

ಮೃತದೇಹದ ಬಳಿ ಪತ್ತೆಯಾದ ಡೆತ್‌ ನೋಟ್‌ ನಲ್ಲಿ “ಭಾರತೀಯ ಕಿಸಾನ್ ಯೂನಿಯನ್ ಜಿಂದಾಬಾದ್” ಎಂದು ಪ್ರಾರಂಭದ್ಲಿ ಬರೆಯಲಾಗಿದೆ. ಬಳಿಕ ಮುಂದುವರಿದು, “ಆತ್ಮೀಯ ರೈತ ಸಹೋದರರೇ, ಈ ಮೋದಿ ಸರ್ಕಾರವು ದಿನಾಂಕದ ನಂತರ ದಿನಾಂಕವನ್ನು ನೀಡುತ್ತಲೇ ಇದೆ. ಈ ಕಪ್ಪು ಕಾನೂನುಗಳು ಯಾವಾಗ ರದ್ದಾಗುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಈ ಕಪ್ಪು ಕಾನೂನುಗಳು ರದ್ದಾಗುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ” ಎಂದು ಬರೆದಿರುವುದಾಗಿ ವರದಿ ತಿಳಿಸಿದೆ.

ಕಳೆದ ತಿಂಗಳು, ರೋಹ್ಟಕ್ ಮೂಲದ 42 ವರ್ಷದ ರೈತ ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದ್ದು, ಅದಕ್ಕೂ ಮೊದಲು, ಡಿಸೆಂಬರ್‌ನಲ್ಲಿ, ಪಂಜಾಬ್‌ನ ಜಲಾಲಾಬಾದ್‌ನ ವಕೀಲರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News