ಸಾಹಿತ್ಯ ಸಮ್ಮೇಳನ ಜಾತ್ರೆಯಾಗದೆ ಅಕ್ಷರ ಗೋಷ್ಠಿಯಾಗಲಿ: ಎಸ್.ಜಿ.ಕೃಷ್ಣ

Update: 2021-02-07 08:38 GMT

ಪುತ್ತೂರು, ಫೆ.7: ಸಾಹಿತ್ಯ ಸಮ್ಮೇಳನಗಳು ಅಕ್ಷರದ ಜಾತ್ರೆಗಳಾಗದೆ ಅಕ್ಷರ ಗೋಷ್ಠಿಯಾಗಬೇಕು. ಸಮ್ಮೇಳನಕ್ಕೆ ಆಸಕ್ತರು ಬರದಿದ್ದಲ್ಲಿ ವಿಮರ್ಶಕರಿಲ್ಲದೆ ಊಟ, ಉಪಹಾರದ ಬಗ್ಗೆ ಟೀಕೆ ಮಾಡುವವರೇ ತುಂಬುತ್ತಾರೆ ಎಂದು ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ ಸಾಹಿತಿ ಎಸ್.ಜಿ.ಕೃಷ್ಣ ಅಭಿಪ್ರಾಯಪಟ್ಟರು.

ಅವರು ರವಿವಾರ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್, ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಾಹಿತ್ಯ ಪರಂಪರೆ

ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಜೈನ, ವೀರಶೈವ, ದಾಸ, ಆಧುನಿಕ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಿದೆ. ಕನ್ನಡ ಕವಿಗಳು, ಕಾದಂಬರಿಗಾರರು, ಕಥೆಗಾರರು, ಭಾಷಾ ಪ್ರೇಮಿಗಳು, ಕನ್ನಡ ಪುಸ್ತಕ ಪ್ರೇಮಿಗಳು, ಮಾಧ್ಯಮಗಳು ಹೀಗೆ ಎಲ್ಲರೂ ಸೇರಿ ಕನ್ನಡ ಭಾಷೆಯ ಬೆಳವಣಿಗೆ ಮಾಡಿದ್ದಾರೆ. ಕನ್ನಡವು ಒಂದು ಶ್ರೀಮಂತ ಭಾಷೆಯಾಗಿ ರೂಪುಗೊಳ್ಳುವಂತೆ ಶ್ರಮಿಸಿದ್ದಾರೆ ಎಂದರು.

ಇತರ ಭಾಷೆಯ ನಾಮಫಲಕಗಳಿಗೆ ಮಸಿ ಬಳಿಯುವುದರಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ಬೊಬ್ಬೆ ಹಾಕಿ ಪ್ರಯೋಜನವಿಲ್ಲ. ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸುವುದರಿಂದ ಭಾಷೆ ಬೆಳೆಯಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಗಳು ಇಂದು ಕೂಡಾ ಉಳಿದುಕೊಂಡಿರುವುದು ಗ್ರಾಮೀಣ ಜನರ ಭಾಷಾ ಪ್ರೀತಿಗೆ ಸಾಕ್ಷಿಯಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನ ಮಾಡಿ ಮಾತನಾಡಿದ ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಕನ್ನಡ ಭಾಷೆ ಸಂಸ್ಕೃತಿ ಮತ್ತು ಸಂಸ್ಕಾರಗಳಿಗೆ ಯಾವತ್ತೂ ಸೋಲಿಲ್ಲ. ಕನ್ನಡ ಭಾಷೆಯನ್ನು ಬಳಸುವ ಮತ್ತು ಬೆಳೆಸುವ ಭಾವನೆ ಬಂದಾಗ ಭಾಷೆ ಬೆಳೆಯುತ್ತದೆ. ಭಾಷಾ ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸಲು ಹೆಚ್ಚು ಒತ್ತು ಕೊಡಬೇಕು. ಕನ್ನಡ ಭಾಷೆ ನಮ್ಮ ಮಾತೃಭಾಷೆ ಎಂದರು.

ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿ‌ನ ಉಪನ್ಯಾಸಕಿ ರೇಶ್ಮಾ ಭಟ್ ಮಾತನಾಡಿ, ಮಾತೃಭಾಷಯ ಮೂಲಕವೇ ನಾವು ಮೊದಲು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತೇವೆ. ಮಾತೃಭಾಷೆಯ ಮೌಖಿಕ ಅಥವಾ ಲಿಖಿತ ರೂಪದಲ್ಲಿ ಇದ್ದರೂ ನಮಗೆ ವಿಚಾರ ಗೃಹಿಕೆಗೆ ಸುಲಭವಾಗುತ್ತದೆ. ಭಾಷೆ ಬೆಳೆದಂತೆ ಸಾಹಿತ್ಯ ಕೂಡಾ ಬೆಳೆಯುತ್ತದೆ. ಮಾತೃಭಾಷೆಯನ್ನು ಕಲಿಯಲು ಎಲ್ಲರೂ ಮುಂದೆ ಬಂದಾಗ ಇದು ಸಾಧ್ಯವಾಗುತ್ತದೆ ಎಂದರು.

ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು.

ಸಮ್ಮೇಳದ ಪುಸ್ತಕ ಪ್ರದರ್ಶನವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ರಾಷ್ಟ್ರ ಧ್ವಜಾರೋಹಣ ನಡೆಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ನರೇಂದ್ರ ರೈ ದೇರ್ಲ, ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಸ್.ಜಯರಾಮ ಕೆದಿಲಾಯ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಎಂ.ಪಿ.ಶ್ರೀನಾಥ್ ಉಜಿರೆ, ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಎನ್.ಕೆ.ಜಗನ್ನಿವಾಸ್ ರಾವ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಆಶಯದ ನುಡಿಗಳನ್ನಾಡಿದರು.

ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣ ಪ್ರಸಾದ್ ಕೆದಿಲಾಯ ಸ್ವಾಗತಿಸಿದರು. ಜಯಮಾಲಾ ವಿ.ಎನ್. ವಂದಿಸಿದರು. ಡಾ.ಶ್ರೀಧರ್ ಎಚ್.ಜಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News