×
Ad

ಮಣಿಪಾಲದಲ್ಲಿ ವಿದ್ಯಾರ್ಥಿಗಳ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2021-02-07 19:49 IST

ಮಣಿಪಾಲ, ಫೆ.7: ಕೆಲ ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಚೂರಿ ತೋರಿಸಿ ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಸುಲಿಗೆಗೈದ ಪ್ರಕರಣದ ಆರೋಪಿಗಳನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಇಂದು ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಶಿವಮೊಗ್ಗ ಟಿಪ್ಪು ನಗರದ ಆಸೀಫ್ (24) ಮತ್ತು ದಸ್ತಗೀರ್ ಬೇಗ್ (24) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹೋಂಡಾ ಸಿವಿಕ್ ಕಾರು, 2 ಮೊಬೈಲ್ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಆಸೀಫ್ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿ ಗಳ ವಿಚಾರಣೆ ಬಾಕಿ ಇರುವುದರಿಂದ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜ.31ರಂದು ರಾತ್ರಿ ಸುಮಾರು 12:15ರ ವೇಳೆ ಮಣಿಪಾಲದ ಕೆಎಫ್‌ಸಿ ಬಿಲ್ಡಿಂಗ್ ಬಳಿ ಮಾತನಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ನೋಡಿದ ಆರೋಪಿಗಳು, ಸಿಗರೇಟ್ ಕೇಳುವ ನೆಪದಲ್ಲಿ ಬಳಿ ಬಂದು ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಅವರ ಬಳಿಯಿದ್ದ 2 ಮೊಬೈಲ್ ಗಳು, 250 ರೂ. ನಗದು ಹಾಗೂ ಇಯರ್ ಫೋನ್‌ಗಳ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮತ್ತು ಡಿವೈಎಸ್ ಪಿ ಸುಧಾಕರ ನಾಯಕ್ ಮೇಲುಸ್ತುವಾರಿಯಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ನೇತೃತ್ವದಲ್ಲಿ ಎಸ್ಸೈ ರಾಜ್‌ಶೇಖರ ವಂದಲಿ, ಪ್ರೊಬೆಶನರಿ ಎಸ್ಸೈಗಳಾದ ನಿರಂಜನ್ ಗೌಡ ಮತ್ತು ದೇವರಾಜ ಬಿರದಾರ, ಎಎಸ್ಸೈ ಶೈಲೇಶ್‌ ಕುಮಾರ್, ಸಿಬ್ಬಂದಿಗಳಾದ ಮಹೇಶ್, ಅಬ್ದುಲ್ ರಝಾಕ್, ಥಾಮ್ಸನ್, ಪ್ರಸನ್ನ, ವಿಶ್ವಜಿತ್, ಮುಹಮ್ಮದ್ ರಫೀಕ್, ಆದರ್ಶ ನಾಯ್ಕ ಹಾಗೂ ಸಿಡಿಆರ್ ಘಟಕದ ದಿನೇಶ್ ಇದರು.

ಬಂಧಿತ ಆರೋಪಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News