ಟ್ವಿಟರ್‌ ನ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕಿ ಮಹಿಮಾ ಕೌಲ್‌ ರಾಜೀನಾಮೆ

Update: 2021-02-07 14:42 GMT

ಹೊಸದಿಲ್ಲಿ, ಫೆ. 7: ಟ್ವಿಟ್ಟರ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥೆ ಮಹಿಮಾ ಕೌಲ್ ಅವರು ವೈಯುಕ್ತಿಕ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಟ್ವಿಟ್ಟರ್‌ನ ಹಿರಿಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ಉಲ್ಲೇಖಿಸಿ ‘ಹಿಂದೂಸ್ತಾನ ಟೈಮ್ಸ್’ ಶನಿವಾರ ವರದಿ ಮಾಡಿದೆ.

 ‘‘ವಿರಾಮ ತೆಗೆದುಕೊಳ್ಳುವ ಉದ್ದೇಶದಿಂದ ಭಾರತ ಹಾಗೂ ದಕ್ಷಿಣ ಏಶ್ಯಾದ ಟ್ವಿಟ್ಟರ್‌ನ ನೀತಿ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿಯಲು ಮಹಿಮಾ ಕೌಲ್ ಈ ವರ್ಷದ ಆರಂಭದಲ್ಲಿ ನಿರ್ಧರಿಸಿದ್ದರು’’ ಎಂದು ಟ್ವಿಟ್ಟರ್‌ನ ಜಾಗತಿಕ ನೀತಿ ಮುಖ್ಯಸ್ಥ ಮೋನಿಕ್ ಮೆಕೆ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇದರಿಂದ ಟ್ವಿಟ್ಟರ್‌ನಲ್ಲಿರುವ ನಮಗೆಲ್ಲರಿಗೂ ನಷ್ಟ ಉಂಟಾಗಿದೆ. ಆದರೆ, ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ಹುದ್ದೆ ನಿರ್ವಹಿಸಿದ ಬಳಿಕ ವೈಯುಕ್ತಿಕ ಜೀವನದಲ್ಲಿ ಹೆಚ್ಚು ಮುಖ್ಯವಾದ ಜನರು ಹಾಗೂ ಸಂಬಂಧಗಳ ಮೇಲೆ ಗಮನ ಕೇಂದ್ರೀಕರಿಸುವ ಅವರ ಆಕಾಂಕ್ಷೆಗೆ ಗೌರವ ನೀಡಬೇಕು ಎಂದು ಮೆಕೆ ಹೇಳಿದ್ದಾರೆ.

ಕೌಲ್ ಅವರು ಮಾರ್ಚ್ ಅಂತ್ಯದವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಅಲ್ಲದೆ, ಕಂಪೆನಿಯ ಪರಿವರ್ತನೆಗೆ ನೆರವಾಗಲಿದ್ದಾರೆ. ಟ್ವಿಟ್ಟರ್ ಈ ಹುದ್ದೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ ಎಂದು ಅವರು ತಿಳಿಸಿದ್ದಾರೆ.

 ರೈತರ ಪ್ರತಿಭಟನೆಗೆ ಸಂಬಂಧಿಸಿದ ಟ್ವಿಟ್ಟರ್ ಹ್ಯಾಷ್‌ಟ್ಯಾಗ್ ಕುರಿತಂತೆ ಭಾರತದಲ್ಲಿ ವಿವಾದ ನಡೆಯುತ್ತಿರುವ ನಡುವೆ ಕೌಲ್ ಅವರ ರಾಜೀನಾಮೆಯ ದೃಢೀಕರಣ ಹೊರಬಿದ್ದಿದೆ. ‘‘ModiplanningFarmerGenocide’’ ಹ್ಯಾಷ್‌ಟ್ಯಾಗ್ ಬಳಸಿದ ಟ್ವೀಟ್ಸ್ ಹಾಗೂ 250 ಖಾತೆಗಳನ್ನು ಮರು ಸ್ಥಾಪಿಸುತ್ತಿರುವುದಕ್ಕೆ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್‌ಗೆ ಬುಧವಾರ ನೋಟಿಸು ಜಾರಿ ಮಾಡಿತ್ತು ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ ನಂತರ ಭಾರತವು ಮೈಕ್ರೋ ಬ್ಲಾಗಿಂಗ್ ಕಂಪನಿಯ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈ ವೇದಿಕೆಯಲ್ಲಿ ದೇಶದ ಪ್ರಮುಖ ನಟರು, ಕ್ರೀಡಾ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಉನ್ನತ ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಬಳಕೆದಾರರಿದ್ದಾರೆ.

ಸದ್ಯ ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದ ಸುಮಾರು 250 ಖಾತೆಗಳನ್ನು "ಏಕಪಕ್ಷೀಯವಾಗಿ" ಅನಿರ್ಬಂಧಿಸಿದ್ದಕ್ಕಾಗಿ ಕೇಂದ್ರವು ಕಳೆದ ವಾರ ಕಂಪನಿಗೆ ಬಲವಾದ ಎಚ್ಚರಿಕೆಯನ್ನು ಕಳುಹಿಸಿತ್ತು. ಟ್ವಿಟರ್ ಹ್ಯಾಂಡಲ್‌ಗಳು "ನಕಲಿ, ಬೆದರಿಸುವ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು" ಟ್ವೀಟ್ ಮಾಡುತ್ತಿವೆ ಅಥವಾ ರಿಟ್ವೀಟ್ ಮಾಡುತ್ತಿವೆ ಎಂದು ಸರ್ಕಾರ ತಿಳಿಸಿತ್ತು. "ಭಾರತ ಸರ್ಕಾರ ಹೊರಡಿಸಿದ ಆದೇಶವನ್ನು ಪಾಲಿಸಲು  ಕಂಪನಿಯು ನಿರಾಕರಿಸಿದೆ" ಎಂದು ಕೇಂದ್ರವು ತನ್ನ ಪತ್ರದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News