ಲಡಾಖ್‌ನಲ್ಲಿ ಭಾರತದ ಪ್ರಪ್ರಥಮ ಭೂಶಾಖ ಕ್ಷೇತ್ರಾಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಅಂಕಿತ
ಲೇಹ್,ಫೆ.7: ಭಾರತದ ಪ್ರಪ್ರಥಮ ಭೂಶಾಖ ಕ್ಷೇತ್ರಾಭಿವೃದ್ಧಿ ಯೋಜನೆಯನ್ನು ಇಲ್ಲಿ ಆರಂಭಿಸಲು ಐತಿಹಾಸಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಇದು ಲಡಾಖ್‌ನ ಸುಸ್ಥಿರ ಅಭಿವೃದ್ಧಿಯತ್ತ ಮತ್ತು ಅದನ್ನು ಇಂಗಾಲ ಮುಕ್ತಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಲಡಾಖ್‌ನ ಉಪರಾಜ್ಯಪಾಲ ಆರ್.ಕೆ.ಮಾಥೂರ್ ಅವರು ಬಣ್ಣಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ಮೊದಲ ಅಭಿವೃದ್ಧಿ ಸಮ್ಮೇಳನದ ನೇಪಥ್ಯದಲ್ಲಿ ಮಾಥೂರ್ ಮತ್ತು ಸಂಸದ ಜಮ್‌ಯಾಂಗ್ ತ್ಸೆರಿಂಗ್ ನಾಮ್‌ಗ್ಯಾಲ್ ಅವರ ಉಪಸ್ಥಿತಿಯಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತ,ಲಡಾಖ್ ಸ್ವಾಯತ್ತ ಪರ್ವತೀಯ ವಿಕಾಸ ಪರಿಷದ್ ಮತ್ತು ಒಎನ್‌ಜಿಸಿ ಎನರ್ಜಿ ಸೆಂಟರ್ ಇವುಗಳ ನಡುವೆ ಈ ಒಪ್ಪಂದವಾಗಿದೆ.
ಯೋಜನೆಯು ಮೂರು ಹಂತಗಳನ್ನೊಳಗೊಂಡಿದ್ದು,ಮೊದಲ ಹಂತದಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಸೃಷ್ಟಿಲಾಗುವುದು ಮತ್ತು ಸಾರ್ವಜನಿಕರಿಗೆ ಶೇ.100ರಷ್ಟು ವಿದ್ಯುತ್ತನ್ನು ಒದಗಿಸಲಾಗುವುದು ಎಂದು ಯೋಜನೆಯನ್ನು ಅನುಷ್ಠಾನಿಸಲಿರುವ ಒಎನ್‌ಜಿಸಿ ಎನರ್ಜಿ ಸೆಂಟರ್‌ನ ವಕ್ತಾರರು ತಿಳಿಸಿದರು. ನಂತರದ ಹಂತಗಳಲ್ಲಿ ಭೂಶಾಖ ನಿಕ್ಷೇಪವನ್ನು ಅನ್ವೇಷಿಸಲು ಗರಿಷ್ಠ ಸಂಖ್ಯೆಯಲ್ಲಿ ಬಾವಿಗಳನ್ನು ತೋಡಲಾಗುವುದು ಮತ್ತು ಲಡಾಖ್‌ನಲ್ಲಿ ಹೆಚ್ಚು ಸಾಮರ್ಥ್ಯದ ಡೆಮೊ ಪ್ಲಾಂಟ್ ಸ್ಥಾಪಿಸಲಾಗುವುದು ಎಂದರು.
ಭೂಶಾಖ ಯೋಜನೆಯ ಸುತ್ತ ಪ್ರವಾಸೋದ್ಯಮ ಮತ್ತು ಹಸಿರು ಮನೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇತರ ದೇಶಗಳಲ್ಲಿಯ ಇಂತಹ ಯೋಜನೆಗಳ ಅಧ್ಯಯನ ಮತ್ತು ಅವುಗಳಿಂದ ಕಲಿಯಬೇಕಾದ ಅಗತ್ಯವಿದೆ ಎಂದು ಮಾಥೂರ್ ಹೇಳಿದರು.
ಯೋಜನೆಯ ಮೂಲಕ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯಾಗಲಿದೆ. ಬುಗ್ಗೆಗಳಿಂದ ಲಭ್ಯ ಬಿಸಿನೀರನ್ನು ಮನೆಗಳನ್ನು ಬೆಚ್ಚಗಿರಿಸಲು ಮತ್ತು ಪ್ರವಾಸಿಗಳನ್ನು ಆಕರ್ಷಿಸಲು ಬಿಸಿನೀರಿನ ಈಜುಕೊಳಗಳನ್ನು ಸ್ಥಾಪಿಸಲು ಬಳಸಲಾಗುವುದು ಎಂದು ಒಎನ್‌ಜಿಸಿ ಎನರ್ಜಿ ಸೆಂಟರ್‌ನ ಮಹಾ ನಿರ್ದೇಶಕ ಸಂಜೀವ ಎಸ್.ಕಟ್ಟಿ ಅವರು ತಿಳಿಸಿದರು.