×
Ad

ಫೆ. 8ರಿಂದ ಫ್ರಂಟ್‌ಲೈನ್ ವರ್ಕರ್ಸ್‌ಗೆ ಕೋವಿಡ್ ಲಸಿಕೆ

Update: 2021-02-07 20:51 IST

ಉಡುಪಿ, ಫೆ.7: ಕೋವಿಡ್-19 ವಿರುದ್ಧದ ಹೋರಾಟದ ಭಾಗವಾಗಿ ಕಳೆದ ಜ.16ರಿಂದ ಪ್ರಾರಂಭಗೊಂಡ ಕೊರೋನ ವಾರಿಯರ್ಸ್‌ಗೆ ಮೊದಲ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಇದೀಗ ಫೆ.8ರಿಂದ ಎರಡನೇ ಹಂತದಲ್ಲಿ ಸೋಂಕಿನ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದ ಫ್ರಂಟ್‌ಲೈನ್ ವರ್ಕರ್ಸ್‌ಗಳಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.

ಈ ಪ್ರಕ್ರಿಯೆಗೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ವತಹ ಲಸಿಕೆಯನ್ನು ಪಡೆಯಲಿದ್ದಾರೆ. ಇವರೊಂದಿಗೆ ಲಸಿಕಾ ಶಿಬಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಗರಸಭೆಯ ಪೌರಾಯುಕ್ತರು ಸಹ ಪಾಲ್ಗೊಳ್ಳಲಿದ್ದಾರೆ.

ಸೋಮವಾರ ಜಿಲ್ಲಾಸ್ಪತ್ರೆ ಸೇರಿದಂತೆ ನಾಲ್ಕು ಸರಕಾರಿ ಆಸ್ಪತ್ರೆಗಳ ಒಟ್ಟು ಐದು ಕೇಂದ್ರಗಳಲ್ಲಿ ಒಟ್ಟು 640 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಇದೆ. ಜಿಲ್ಲಾಸ್ಪತ್ರೆಯ ಒಂದು ಕೇಂದ್ರದಲ್ಲಿ 150, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿಗೆ, ಕುಂದಾಪುರ ತಾಲೂಕು ಆಸ್ಪತ್ರೆಯ ಎರಡು ಕೇಂದ್ರದಲ್ಲಿ ಒಟ್ಟು 240 ಮಂದಿಗೆ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯ ಒಂದು ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ನೀಡಲಾಗುವುದು.

ಈ ಎಲ್ಲಾ 640 ಫಲಾನುಭವಿಗಳ ಹೆಸರುಗಳನ್ನು ಕೋವಿನ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News