×
Ad

ಮಂಗಳೂರು : ಶಾಂತಿ ಪ್ರಕಾಶನ ನೂತನ ಕಚೇರಿ ಉದ್ಘಾಟನೆ

Update: 2021-02-07 21:26 IST

ಮಂಗಳೂರು, ಫೆ.7: ಜಗತ್ತಿನ ಎಲ್ಲ ಧರ್ಮಗಳ ಧರ್ಮಗ್ರಂಥಗಳು ಶಾಂತಿ, ಸಹಬಾಳ್ವೆಯನ್ನು ಬೋಧಿಸುತ್ತಿದ್ದು, ಎಲ್ಲ ಧರ್ಮಗಳ ಅಡಿಪಾಯ ಇದೆ ಆಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶಾಂತಿ ಪ್ರಕಾಶನದ ನೂತನ ಕಚೇರಿಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳ ಹಾದಿಗಳು ವಿಭಿನ್ನ ವಾದರೂ ಅಂತಿಮವಾಗಿ ಶಾಂತಿಯನ್ನೇ ಪ್ರತಿಪಾದಿಸುತ್ತವೆ. ಶಾಂತಿ ಪ್ರಕಾಶನ ಇಸ್ಲಾಂ, ಮುಸ್ಲಿಂರ ಬದುಕನ್ನು ಕನ್ನಡ ಭಾಷೆಯ ಕೃತಿಗಳ ಮೂಲಕ ನೀಡುವುದರಿಂದ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತ ಮಾಡುತ್ತಿದೆ ಎಂದು ತಿಳಿಸಿದರು.

ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಧರ್ಮ ಎನ್ನುವುದು ಒಂದು ಜೀವನ ಪದ್ಧತಿ. ಮಕ್ಕಳಿಗೆ ನಾವು ಸಂಪತ್ತನ್ನು ಮಾಡಿ ಹಾಕುವ ಬದಲಾಗಿ ಅವರಿಗೆ ಬದುಕಿನ ವೌಲ್ಯಗಳನ್ನು ಕಲಿಸಿಕೊಡಬೇಕು. ಕೇವಲ ಬದುಕುವುದು ಮುಖ್ಯವಲ್ಲ ಹತ್ತಾರು ಮಂದಿಗೆ ಉಪಕಾರವಾಗುವಂತೆ ಬದುಕುವಂತಹ ವೌಲ್ಯ ಪ್ರತಿಯೊಬ್ಬರಲ್ಲಿಯೂ ಬೆಳೆದು ಬರಬೇಕು ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಶಾಂತಿ ಪ್ರಕಾಶ ತನ್ನ ಕೃತಿಗಳ ಮೂಲಕ ಧರ್ಮಗಳ ನಡುವಿನ ಅಪರಿಚಿತತೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಧರ್ಮಗಳ ನಡುವೆ ಪರಸ್ಪರ ತಿಳುವಳಿಕೆಯನ್ನು ಹಂಚಿ ಬಹುಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ಶಾಂತಿ ಪ್ರಕಾಶನ ವೈಚಾರಿಕ ಸಾಹಿತ್ಯವನ್ನು ಬೆಳೆಸುವಂತಹ 280ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದೆ ಎಂದರು.

ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಉಳ್ಳಾಲ ಹಿರಾ ಕಾಲೇಜಿನ ಇಸ್ಲಾಮಿಕ್ ಸ್ಟಡೀಸ್‌ನ ಮುಖ್ಯಸ್ಥ ಮೌಲಾನ ಶುಐಬ್ ನದ್ವಿ, ಶಾಂತಿ ಪ್ರಕಾಶನದ ಅಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಅದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News