×
Ad

“ಅಣುಶಕ್ತಿ ಒಪ್ಪಂದಕ್ಕೆ ಇರಾನ್ ಬದ್ಧವಾಗಿರಬೇಕಾದರೆ ಅಮೆರಿಕವು ಎಲ್ಲಾ ನಿರ್ಬಂಧಗಳನ್ನು ರದ್ದುಪಡಿಸಬೇಕು”: ಖಾಮಿನೈ ಘೋಷಣ

Update: 2021-02-07 22:06 IST

  ಟೆಹರಾನ್,ಫೆ.7: ಜಾಗತಿ ಪ್ರಭಾವಿ ರಾಷ್ಟ್ರಗಳ ಜೊತೆ ಏರ್ಪಡಿಸಿ ಕೊಂಡಿರುವ ಪರಮಾಣು ಒಡಂಬಡಿಕೆಗೆ ಬದ್ಧವಾಗಿ ಇರಾನ್ ನಡೆದು ಕೊಳ್ಳಬೇಕೆಂದು ಅಮೆರಿಕವು ಬಯಸುತ್ತಿದ್ದರೆ, ಅದರ ಮೇಲಿನ ಎಲ್ಲಾ ನಿರ್ಬಂಧಗಳನ್ನು ರದ್ದುಪಡಿಸ ಬೇಕೆಂದು ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಶುಕ್ರವಾರ ಹೇಳಿದ್ದಾರೆ.

 ‘‘ ಒಂದು ವೇಳೆ ಇರಾನ್ ತನ್ನ ಬದ್ಧತೆಗಳಿಗೆ ನಡೆದುಕೊಳ್ಳಬೇಕೆಂದು ಅಮೆರಿಕ ಬಯಸಿದ್ದರೆ, ಅದರ ವಿರುದ್ಧ ಹೇರಲಾಗಿರುವ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಬೇಕಾಗಿದೆ. ಆನಂತರ ನಾವು ನಮ್ಮ ನಿಲುವನ್ನು ಪರಾಮರ್ಶಿಸುತ್ತೇವೆ ಹಾಗೂ ನಮ್ಮ ಬದ್ಧತೆಗಳಿಗೆ ಮರಳುತ್ತೇವೆ’’ ಎಂದು ಖಾಮಿನೈ ಹೇಳಿದ್ದಾರೆಂದು ಸರಕಾರಿ ಸ್ವಾಮ್ಯದ ಸುದ್ದಿನವಾಹಿನಿಯೊಂದು ವರದಿ ಮಾಡಿದೆ.

  ‘‘ ಇದು ಇಸ್ಲಾಮಿಕ್ ಗಣರಾಜ್ಯದ ಖಚಿತವಾದ ಹಾಗೂ ತಿರುವುಮುರುವು ಗೊಳಿಸಲಾಗದಂತಹ ನೀತಿಯಾಗಿದೆ. ಈ ವಿಷಯದಲ್ಲಿ ದೇಶದ ಎಲ್ಲಾ ಅಧಿಕಾರವರ್ಗವು ಅವಿರೋಧವಾದ ಅಭಿಪ್ರಾಯ ಹೊಂದಿದೆ ಹಾಗೂ ಯಾರೂ ಕೂಡಾ ಈ ನಿಲುವಿನಿಂದ ವಿಮುಖವಾಗಲಾರರು’’ ಎಂದು ಖಾಮಿನೈ ಹೇಳಿದ್ದಾರೆ.

   2018ರಲ್ಲಿ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೊನೆಗೊಳಿಸುವುದಕ್ಕಾಗಿ ಅದರ ವಿರುದ್ಧ ಗರಿಷ್ಠವಾದ ಒತ್ತಡವನ್ನು ಹೇರುವುದಕ್ಕಾಗಿ ತಾನು ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಟ್ರಂಪ್ ಘೋಷಿಸಿದ್ದರು.

    ಇದಕ್ಕೆ ಪ್ರತಿಯಾಗಿ ಇರಾನ್‌ನ ಹಂತಹಂತವಾಗಿ ತನ್ನ ಅಣುಶಕ್ತಿ ಕಾರ್ಯಕ್ರಮವನ್ನು ಸೀಮಿತಗೊಳಿಸುವ ಕುರಿತಾಗಿ ಒಪ್ಪಂದದಲ್ಲಿನ ಬದ್ಧತೆಗಳನ್ನು ಉಲ್ಲಂಘಿಸುತ್ತಲೇ ಬಂದಿತ್ತು.

ಅಣುಶಕ್ತಿ ಒಪ್ಪಂದಕ್ಕೆ ಅಮೆರಿಕ ಮರುಸೇರ್ಪಡೆಗೊಳ್ಳಲಿದೆಯೆಂದು ಬೈಡೆನ್ ಭರವಸೆ ನೀಡಿದ ಹೊರತಾಗಿಯೂ, ಇರಾನ್ ಅಣ್ವಸ್ತ್ರ ಕಾರ್ಯಕ್ರಮದತ್ತ ಸಾಗುವುದರಿಂದ ಹಿಂದೆ ಸರಿಯಬೇಕೆಂದು ಸೂಚಿಸಿದ್ದಾರೆ.

 ಬೈಡೆನ್ ಆಡಳಿತದ ಮೇಲಿನ ಒತ್ತಡವನ್ನು ತೀವ್ರಗೊಳಿಸುವ ಪ್ರಯತ್ನವಾಗಿ ಇರಾನ್ ಈ ತಿಂಗಳ ಅಂತ್ಯಲ್ಲಿ ಅಣುಶಕ್ತಿ ಸ್ಥಾವರಗಳನ್ನು ಅಂತಾರಾಷ್ಟ್ರೀಯ ಜ್ಞರ ಸಮಿತಿಯು ತಪಾಸಣೆ ನಡೆಸುವುದನ್ನು ತಡೆಗಟ್ಟುವುದಾಗಿ ಬೆದರಿಕೆ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News