ಬಿಲ್ಲವ ಸಮುದಾಯದ ಅವಹೇಳನೆ ಆರೋಪ : ಜಗದೀಶ್ ಅಧಿಕಾರಿ ವಿರುದ್ಧ ದೂರು
ಮೂಡುಬಿದಿರೆ: ಕೋಟಿ ಚೆನ್ನಯ್ಯರ ಹಾಗೂ ಹಿರಿಯ ರಾಜಕಾರಣಿ ಬಿಲ್ಲವ ಮುಖಂಡ ಜನಾರ್ಧನ ಪೂಜಾರಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಬಿಲ್ಲವ ಸಂಘದ ವಿವಿಧ ಘಟಕಗಳ ಮುಖಂಡರು ಶುಕ್ರವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಟಿ ಚೆನ್ನಯ್ಯರನ್ನು ಕೀಳಾಗಿ ಮಾತನಾಡಿದ್ದು ಹಾಗೂ ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಬಗ್ಗೆಯು ಅವಹೇಳನಕಾರಿಯಾಗಿ ಮಾತನಾಡಿ ಬಿಲ್ಲವ ಸಮಾಜದವರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿ ಬಿಲ್ಲವರ ಬಗ್ಗೆ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗಿದೆ. ಆದ್ದರಿಂದ ಜಗದೀಶ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ಸಂಘದ ಪದಾಧಿಕಾರಿಗಳು, ಬಿಲ್ಲವ ಸಂಘದ ಮಹಿಳಾ ಘಟಕ, ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.