ಪಂಗೊಂಗ್ ಸರೋವರದಿಂದ ಭಾರತ, ಚೀನಾ ಸೇನೆಗಳ ಹಿಂದೆಗೆತ ಆರಂಭ

Update: 2021-02-10 16:23 GMT

ಬೀಜಿಂಗ್ (ಚೀನಾ), ಫೆ. 10: ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ವ್ಯವಸ್ಥಿತ ಹಿಂದೆಗೆತ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾಗಳು ಆರಂಭಿಸಿವೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಬುಧವಾರ ಹೇಳಿದ್ದಾರೆ.

 ‘‘ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಚೀನಾ ಮತ್ತು ಭಾರತದ ಮುಂಚೂಣಿ ಪಡೆಗಳನ್ನು ಏಕರೂಪವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಫೆಬ್ರವರಿ 10ರಂದು ಆರಂಭವಾಗಿದೆ’’ ಎಂದು ಸೀನಿಯರ್ ಕರ್ನಲ್ ವು ಕಿಯಾನ್ ಲಿಖಿತ ಹೇಳಿಕೆಯೊಂದರಲ್ಲಿ ತಿಳಿಸಿದರು.

ಮೊಲ್ಡೊ-ಚುಶುಲ್ ಗಡಿಯ ಚೀನಾದ ಕಡೆಯಲ್ಲಿ ಕಳೆದ ತಿಂಗಳು ನಡೆದ 9ನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಮೂಡಿದ ಒಮ್ಮತದಂತೆ ಸೇನಾ ಹಿಂದೆಗೆತ ಕಾರ್ಯ ನಡೆದಿದೆ ಎಂದು ಅವರು ನುಡಿದರು.

 ಮಾತುಕತೆಗಳು ‘‘ಧನಾತ್ಮಕ, ರಚನಾತ್ಮಕ ಮತ್ತು ಪ್ರಾಯೋಗಿಕವಾಗಿತ್ತು’’ ಹಾಗೂ ತ್ವರಿತ ಸೇನಾ ವಾಪಸಾತಿಯನ್ನು ಸಾಧಿಸಲು ಉಭಯ ಬಣಗಳು ಒಪ್ಪಿಕೊಂಡಿವೆ ಎಂಬುದಾಗಿ ಆ ಮಾತುಕತೆಯ ಬಳಿಕ ಭಾರತ ಹೇಳಿತ್ತು.

15 ಗಂಟೆಗಳಿಗೂ ಹೆಚ್ಚು ಕಾಲ ನಡೆದ 9ನೇ ಸುತ್ತಿನ ಮಾತುಕತೆಯನ್ನು ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ಉದ್ದೇಶದಿಂದ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News