ಪ್ರತಿಭಟನಕಾರರನ್ನು ನಾಯಿಗೆ ಹೋಲಿಸಿದ ತೆಲಂಗಾಣ ಮುಖ್ಯಮಂತ್ರಿ: ಕ್ಷಮೆ ಯಾಚಿಸಲು ವಿಪಕ್ಷಗಳ ಆಗ್ರಹ

Update: 2021-02-11 09:33 GMT

ನಲ್ಗೊಂಡ: ಬುಧವಾರ ನಡೆದ ಸಾರ್ವಜನಿಕ ಸಮಾರಂಭವೊಂದರ ವೇಳೆ  ಕಾಣಿಸಿಕೊಂಡ ಪ್ರತಿಭಟನಾಕಾರರ ಗುಂಪೊಂದನ್ನು 'ನಾಯಿಗಳಿಗೆ' ಹೋಲಿಸಿ  ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿವಾದಕ್ಕೀಡಾಗಿದ್ದಾರೆ. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷಗಳು ಮುಖ್ಯಮಂತ್ರಿ ಕ್ಷಮೆಯಾಚಿಸಬೇಕೆಂದು ಬೇಡಿಕೆಯಿಟ್ಟಿವೆ.

ನಲ್ಗೊಂಡ ಜಿಲ್ಲೆಯ ನಾಗಾರ್ಜುನ್ ಸಾಗರ್ ಪ್ರದೇಶದಲ್ಲಿ ಸರಕಾರಿ ಯೋಜನೆಯೊಂದಕ್ಕೆ  ಶಿಲಾನ್ಯಾಸ ನೆರವೇರಿಸಿ ರಾವ್ ಮಾತನಾಡುತ್ತಿರುವ ವೇಳೆ ಮುಖ್ಯಮಂತ್ರಿಗೆ ಮನವಿ ನೀಡಲೆಂದು ಮಹಿಳೆಯರನ್ನೊಳಗೊಂಡ ಗುಂಪೊಂದು ಅಲ್ಲಿಗೆ ಆಗಮಿಸಿ ನಂತರ ಪ್ರತಿಭಟನೆ ಆರಂಭಿಸಿತ್ತು.

ಇದರಿಂದ ವಿಚಲಿತರಾದ ಮುಖ್ಯಮಂತ್ರಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ "ನೀವು ಮನವಿ ಸಲ್ಲಿಸಿರುವುದರಿಂದ ಇನ್ನು ಇಲ್ಲಿಂದ ಹೊರನಡೆಯಬಹುದು. ಇಲ್ಲಿಯೇ ಇರುತ್ತೀರಾದರೆ ಶಾಂತಿ ಕಾಪಾಡಿ.  ನಿಮ್ಮ ಈ ಮೂರ್ಖತನದ ಕೃತ್ಯಗಳಿಂದ ಯಾರಿಗೂ ಲಾಭವಿಲ್ಲ, ನಿಮಗೆ ಅನಗತ್ಯವಾಗಿ ಏಟು ಬೀಳಬಹುದು. ನಾವು ಇಂತಹ ಬಹಳಷ್ಟು ಜನರನ್ನು ನೋಡಿದ್ದೇವೆ, ಅಮ್ಮಾ, ನಿಮ್ಮಂತಹ ಅನೇಕ ನಾಯಿಗಳಿವೆ, ಇಲ್ಲಿಂದ ಹೊರಡಿ" ಎಂದು ಸಿಟ್ಟಿನಿಂದ ಹೇಳಿದ್ದಾಗಿ ವರದಿಗಳು ತಿಳಿಸಿವೆ.

"ತೆಲಂಗಾಣ ಸಿಎಂ ಅವರು ಸಾರ್ವಜನಿಕ ಸಭೆಯಲ್ಲಿ ಮಹಿಳೆಯರನ್ನು ನಾಯಿಗಳು ಎಂದಿದ್ದಾರೆ. ಇದು ಪ್ರಜಾಪ್ರಭುತ್ವವೆಂಬುದನ್ನು ಮರೆಯಬೇಡಿ. ನೀವು ಆ ಹುದ್ದೆಯಲ್ಲಿರಲು ಅಲ್ಲಿ ನಿಂತಿದ್ದ ಮಹಿಳೆಯರಂತೆ ಹಲವರು ಕಾರಣ. ಅವರೇ ನಮ್ಮ ಮಾಲಿಕರು. ಕ್ಷಮೆಯಾಚಿಸಿ, ಚಂದ್ರಶೇಖರ್" ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಅಧ್ಯಕ್ಷ ಮಣಿಕ್ಕಂ ಠಾಗೋರ್ ಆಗ್ರಹಿಸಿದ್ದಾರೆ.

ಈ ನಡುವೆ, ಸಿಎಂ ನೀಡಿದ ಹೇಳಿಕೆ ಹಿಂದುಗಳು ಹಾಗೂ ಬಿಜೆಪಿಗೆ ಅವಮಾನ ಎಂದು ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News