ಶೀಘ್ರ ನೆರವು ಕೊಡಲು ನಾವು ನಿಮ್ಮ ಜೊತೆಗಿದ್ದೇವೆ: ನ್ಯಾ. ಶಿಲ್ಪಾ
ಮಂಗಳೂರು : ಪಚ್ಚನಾಡಿ ದುರಂತ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಉಚ್ಚ ನ್ಯಾಯಾಲಯವು ಶೀಘ್ರ ಪ್ರಕ್ರಿಯೆಗಳನ್ನು ನಡೆಸಿ ಮಧ್ಯಂತರ ಪರಿಹಾರಕ್ಕೆ ಆದೇಶಿದೆ. ಅದರಂತೆ ಇಂದು ಮಧ್ಯಂತರ ಪರಿಹಾರವನ್ನು ನೀಡಲಾಗುತ್ತಿದ್ದು, ಯಾವುದೇ ರೀತಿಯ ಆಕ್ಷೇಪ, ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ವಕೀಲರ ಗಮನಕ್ಕೆ ತರಬಹುದಾಗಿದೆ. ಶೀಘ್ರ ನೆರವು ಕೊಡಲು ನಾವು ಸದಾ ಸಂತ್ರಸ್ತರ ಜತೆಗಿದ್ದೇವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶೆ ಶಿಲ್ಪಾ ಭರವಸೆ ನೀಡಿದ್ದಾರೆ.
ಪಚ್ಚನಾಡಿಯಲ್ಲಿ 2019ರ ಆಗಸ್ಟ್‌ನಲ್ಲಿ ಭಾರೀ ಮಳೆಯ ಸಂದರ್ಭ ಸಂಭವಿಸಿದ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಹೈಕೋರ್ಟ್ ನಿರ್ದೇಶನ ದಂತೆ 45 ಮಂದಿ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ನೀಡುವ ಕಾರ್ಯ ಇಂದು ಜಿಲ್ಲಾ ನ್ಯಾಯಾಲಯದ ಹಳೆ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ಕಳೆದ ಕೆಲ ತಿಂಗಳ ಹಿಂದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರ ಜತೆ ಕಾರ್ಯಕ್ರಮಕ್ಕೆ ಹೋದಾಗ ಪಚ್ಚನಾಡಿ ತ್ಯಾಜ್ಯ ದುರಂತ ಸ್ಥಳ, ಅಲ್ಲಿನ ದುರ್ವಾಸನೆ, ಅಲ್ಲಿನ ಸನ್ನಿವೇಶ ಕಂಡು ಭಯಭೀತರಾಗಿದ್ದೆವು. ಅದರಂತೆ ಅಲ್ಲಿ ಸುಮಾರು ಒಂದು ತಿಂಗಳ ಅಧ್ಯಯನ ನಡೆಸಿ ದಾಖಲೆಗಳನು ಸಂಗ್ರಹಿಸಿ ರಾಜ್ಯ ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ವರದಿ ಆಧಾರದ ಮೇರೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅದನ್ನು ಕೈಗೆತ್ತಿಕೊಂಡ ನ್ಯಾಯಾಲಯದ ಇದೀಗ ಮಧ್ಯಂತರ ಪರಿಹಾರಕ್ಕೆ ತೀರ್ಪು ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ, ಮನಪಾ ಆಯುಕ್ತರು ಹಾಗೂ ಸಂತ್ರಸ್ತರ ಸಭೆ ನಡೆಸಿ ಪರಿಹಾರ ನಿಗದಿಪಡಿಸಲಾಗಿದೆ. ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಸಮರ್ಪಕವಾಗಿಲ್ಲ ಎಂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಶಿಲ್ಪಾ ಹೇಳಿದರು.
ಈ ಸಂದರ್ಭ ಸ್ಥಳೀಯ ಪಾಲಿಕೆ ಸದಸ್ಯರಾದ ಸಂಗೀತಾ, ಭಾಸ್ಕರ ಕೆ., ವಕೀಲರಾದ ಚಂದ್ರಹಾಸ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
ಆರ್‌ಟಿಜಿಎಸ್ ವ್ಯವಸ್ಥೆಯಡಿ ಪರಿಹಾರ ನೇರ ಬ್ಯಾಂಕ್ ಖಾತೆಗೆ
ಸಂತ್ರಸ್ತರಿಗೆ ಆರ್‌ಟಿಜಿಎಸ್ ವ್ಯವಸ್ಥೆಯಡಿ ಮಧ್ಯಂತರ ಪರಿಹಾರದ ಹಣವನ್ನು (ಪಾಲಿಕೆ ಹಾಗೂ ಸಂತ್ರಸ್ತರ ನಡುವಿನ) ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಪಾವತಿ ಮಾಡಲಾಗುತ್ತದೆ. ಭೂಮಿಯನ್ನು ಬಿಟ್ಟು ಕೊಡಲು ನಿರ್ಧರಿಸಿರುವ ಸಂತ್ರಸ್ತರು ಪೂರ್ಣ ಪ್ರಮಾಣದ ಪರಿಹಾರದ ಹಣ ಪಡೆದ ಬಳಿಕವಷ್ಟೆ ಭೂಮಿಯ ಮಾಲಕತ್ವ ಹಾಗೂ ಸ್ವಾಧೀನತೆಯನ್ನು ಪಾಲಿಕೆಗೆ ಹಸ್ತಾಂತರಿಸ ಬಹುದಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.
ಕೃಷಿ ಭೂಮಿಯಲ್ಲಿರುವ ಕೊಳಚೆ ನೀರು ಸ್ವಚ್ಛಗೊಳಿಸಿ ಕೊಡಿ
‘‘ತ್ಯಾಜ್ಯ ಹಾಗೂ ಕೊಳಚೆ ನೀರು ಹರಿದು ಏಳು ಮಂದಿ ಸಹೋದರರನ್ನು ಒಳಗೊಂಡಂತೆ ನಮ್ಮ ಒಟ್ಟು 3 ಎಕರೆ 5 ಸೆಂಟ್ಸ್ ಜಾಗದಲ್ಲಿ ಕೊಳಚೆ ನೀರು ತುಂಬಿದೆ. ಅದನ್ನಿನ್ನೂ ತೆರವುಗೊಳಿಸಲಾಗಿಲ್ಲ. ಅದನ್ನು ಸ್ವಚ್ಚಗೊಳಿಸಿ ಆ ಜಾಗದಲ್ಲಿ ನಮಗೆ ಕೃಷಿ ಮಾಡಲು ಅವಕಾಶ ನೀಡಿ. ಅಲ್ಲೇ ಕೃಷಿ ಮಾಡಿ ಜೀವನ ನಡೆಸಲು ಬಯಸಿದ್ದೇನೆ’’ ಎಂದು ದುರಂತ ಸಂತ್ರಸ್ತರಲ್ಲಿ ಒಬ್ಬರಾದ ಕರುಣಾಕರ ಅವರು ನ್ಯಾ. ಶಿಲ್ಪಾ ಹಾಗೂ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರಲ್ಲಿ ಮನವಿ ಮಾಡಿಕೊಂಡರು.
ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ, ‘‘ಕೃಷಿ ಬೆಳೆ ಪರಿಹಾರವಾಗಿ ಈಗಾಗಲೇ ಸುಮಾರು 2.5 ಲಕ್ಷ ರೂ. ನೀಡಲಾಗಿದೆ. ಇದೀಗ ತ್ಯಾಜ್ಯ ದಡಿ ಹುದುಗಿರುವ ಸುಮಾರು 14 ಸೆಂಟ್ಸ್ ಭೂಮಿಗೆ ಮಧ್ಯಂತರ ಪರಿಹಾರವನ್ನು ನೀಡಿದ್ದಾರೆ. ಇದೊಂದು ಸಮಾಧಾನಕರ ಸಂಗತಿ. ಆದರೆ ಹಣದಿಂದ ಕೃಷಿಯ ಖುಷಿಯನ್ನು, ಆತ್ಮತೃಪ್ತಿಯನ್ನು ಅಳೆಯಲಾಗದು. ಈಗಾಗಲೇ ದೊರಕಿದ ಕೃಷಿ ಬೆಳೆ ಪರಿಹಾರದಲ್ಲಿ ನಾನು ತೋಟದ ಕೆಲವೆಡೆ ಕೃಷಿಯನ್ನು ಆರಂಭಿಸಿದ್ದೇನೆ. ನಾನು ಆ ಜಾಗದಲ್ಲಿಯೇ ಹುಟ್ಟಿ ಬೆಳೆದವ. ಅಲ್ಲಿಯೇ ನಾನು ಕೃಷಿಯನ್ನು ಮುಂದುವರಿಸಲು ನಿರ್ಧರಿಸಿ ದ್ದೇನೆ. ನಾನು ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ’’ ಎಂದು ಕರುಣಾಕರ ಅವರು ದುರಂತ ಸಂಭವಿಸಿದ ಆರಂಭದಲ್ಲಿ ಹೇಳಿದ್ದ ದೃಢ ನಿರ್ಧಾರವನ್ನೇ ಪುನರುಚ್ಚರಿಸಿದರು.
ಈಗಾಗಲೇ ಬೆಳೆ ಪರಿಹಾರವಾಗಿ ಸಂತ್ರಸ್ತರಿಗೆ 2.5 ಕೋಟಿರೂ.ಗಳನ್ನು ವಿತರಿಸಲಾಗಿತ್ತು. ಇಂದು 45 ಮಂದಿಗೆ ಒಟ್ಟು 14 ಕೋಟಿ ರೂ.ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ