ಬೈಂದೂರು: ಡಿವೈಡರ್‌ಗೆ ಬೈಕ್ ಢಿಕ್ಕಿ ; ಬಾಲಕ ಮೃತ್ಯು
Update: 2021-02-11 16:19 IST
ಬೈಂದೂರು, ಫೆ.11: ಶಿರೂರು ಅಳ್ವೆಗದ್ದೆ ಕ್ರಾಸ್ ಬಳಿ ಬೈಕ್ ಒಂದು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಾಲಕ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಶಿರೂರು ಹಡವಿನಕೋಣೆ ನಿವಾಸಿ 14ರ ಹರೆಯದ ಅರ್ಹಾನ್ ಮೃತ ಬಾಲಕ.
ಅಯಿಷಾ ಎಂಬವರ ಪುತ್ರ ಅರ್ಹಾನ್ ಇಂದು ಬೆಳಗ್ಗೆ ಮನೆಯಿಂದ ಶಿರೂರು ಪೇಟೆ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಗಂಭೀರಗಾಯಗೊಂಡ ಅರ್ಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಒಂದು ವಾರದ ಹಿಂದಷ್ಟೇ ಅರ್ಹಾನ್‌ನ್ನು ಪರವಾನಿಗೆ ಇಲ್ಲದೇ ಬೈಕ್ ಚಲಾಯಿಸಿದ್ದಕ್ಕೆ ಪೊಲೀಸರು ಬೈಕ್ ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಎರಡು ದಿನಗಳ ಬಳಿಕ ತಾಯಿ ಪೊಲೀಸ್ ಠಾಣೆಗೆ ಬಂದು ದಂಡ ಕಟ್ಟಿ ಬೈಕ್ ಬಿಡಿಸಿಕೊಂಡಿದ್ದರು. ಇದೀಗ ಅದೇ ಬೈಕ್ ಆಕೆಯ ಏಕೈಕ ಪುತ್ರನನ್ನು ಬಲಿ ಪಡೆದಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.