×
Ad

ಅವಳಿ ಕೊಲೆ ಪ್ರಕರಣ; ಆರೋಪಿ ವಿರುದ್ಧದ ಆರೋಪ ಸಾಬೀತು: ಸೋಮವಾರ ಶಿಕ್ಷೆ ಪ್ರಕಟ

Update: 2021-02-11 16:32 IST

ಉಡುಪಿ, ಫೆ.11: ಸುಮಾರು ಆರು ವರ್ಷಗಳ ಹಿಂದೆ ಉಡುಪಿ ನಗರದ ಚಿಟ್ಪಾಡಿಯಲ್ಲಿ ನಡೆದ ಅವಳಿ ಕೊಲೆ ಪ್ರಕರಣದ ಆರೋಪಿ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ತನ್ನ ತೀರ್ಪಿನಲ್ಲಿ ಪ್ರಕಟಿಸಿರುವ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್., ಆತನಿಗೆ ವಿಧಿಸುವ ಶಿಕ್ಷೆಯನ್ನು ಫೆ.15ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಅಸ್ಸಾಂ ಮೂಲದ ಸಂಜಯ್‌ ಕುಮಾರ್ ದತ್ತ (44) ಅವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಆತ 2015ರ ಎಪ್ರಿಲ್ 30ರ ರಾತ್ರಿ 10:30ರ ಸುಮಾರಿಗೆ ತನ್ನ ಪತ್ನಿ ಅರ್ಚನಾ ಹಾಗೂ ಅತ್ತೆ ನಿರ್ಮಲಾರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿತ್ತು. ಇವರಲ್ಲಿ ನಿರ್ಮಲಾ ಸ್ಥಳದಲ್ಲೆ ಮೃತಪಟ್ಟಿದ್ದರೆ, ಅರ್ಚನಾ ಮರುದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮೇ 1ರಂದು ಆರೋಪಿ ಸಂಜಯ್ ದತ್ತನ್ನು ಪೊಲೀಸರು ಬಂಧಿಸಿದ್ದರು.

ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಪ್ರಕರಣ ತನಿಖೆ ನಡೆಸಿದ್ದರು. 2019ರ ಆ.24ರಂದು ಪ್ರಕರಣದ ತನಿಖೆ ಪ್ರಾರಂಭಗೊಂಡಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಫೆ.10ರಂದು ತೀರ್ಪು ಪ್ರಕಟಿಸಿದರು. ಪ್ರಕರಣದಲ್ಲಿ ಒಟ್ಟು 44 ಮಂದಿ ಸಾಕ್ಷಿಗಳನ್ನು ಗುರುತಿಸಲಾಗಿದ್ದು, ಇವರಲ್ಲಿ 25 ಮಂದಿಯ ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ಸಂಜಯ್‌ಕುಮಾರ್ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಧೀಶರು ಪ್ರಕಟಿಸಿದರು.

ಘಟನೆ ಹಿನ್ನೆಲೆ: ಅಸ್ಸಾಂ ಮೂಲದ ಸಂಜಯ್ ಕುಮಾರ್ ದತ್ತ ಕಳೆದ 20 ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದ್ದು, ಮಂಗಳೂರು ಬೈಕಂಪಾಡಿಯ ಕಾರ್ಖಾನೆಯೊಂದರಲ್ಲಿ ಪ್ರೋಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದ. ಆತ 2007ರಲ್ಲಿ ಚಿಟ್ಪಾಡಿಯ ಬಿಲ್ಲವ ಜಾತಿಯ ನಿರ್ಮಲ ಎಂಬವರ ಮಗಳಾದ ಅರ್ಚನಾಳನ್ನು ಮದುವೆಯಾಗಿದ್ದ. ದಂಪತಿಗಳಿಗೆ ಎರಡು ಗಂಡು ಹಾಗೂ ಓರ್ವ ಮಗಳಿದ್ದರು. ದಂಪತಿಯ ನಡುವೆ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಗಲಾಟೆಯಾಗುತ್ತಿತ್ತು ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿತ್ತು.

2015ರ ರಾತ್ರಿ 10:30ರ ಸುಮಾರಿಗೆ ಗಂಡ-ಹೆಂಡತಿ ಮಧ್ಯೆ ಮತ್ತೆ ಜಗಳವಾಗಿದ್ದು, ಸಿಟ್ಟಿನಿಂದ ಆರೋಪಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕಡಿಯಲು ಮುಂದಾಗಿದ್ದು, ತಡೆಯಲು ನಿರ್ಮಲಾ ಮಧ್ಯಪ್ರವೇಶಿಸಿದಾಗ ಆಕೆ ಏಟು ಬಿದ್ದು ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಆರೋಪಿ ಪತ್ನಿಯನ್ನು ಯನ್ನು ಅಟ್ಟಿಸಿಕೊಂಡು ಹೋಗಿ ಕತ್ತಿಯಿಂದ ಕಡಿದಿದ್ದು, ಗಂಭೀರವಾಗಿ ಗಾಯಗೊಂಡ ಅರ್ಚನಾರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೇ 1ರಂದು ಮೃತಪಟ್ಟಿದ್ದರು. ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ಕೆ. ಜುಲೈ 14ರಂದು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News