×
Ad

ಸಂಸತ್ತಿನ 5 ದಿನಗಳ ಅವಧಿಯಲ್ಲಿ ಪ್ರಧಾನಿ ಮೋದಿಯನ್ನು ತಮ್ಮ ಭಾಷಣಗಳಲ್ಲಿ ಒಟ್ಟು 420 ಬಾರಿ ಉಲ್ಲೇಖಿಸಿದ ಬಿಜೆಪಿ ಸಂಸದರು

Update: 2021-02-11 17:51 IST

ಹೊಸದಿಲ್ಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ  44 ಬಿಜೆಪಿ ಸಂಸದರು ತಮ್ಮ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬರೋಬ್ಬರಿ 420 ಬಾರಿ ಉಲ್ಲೇಖಿಸಿದ್ದಾರೆ.  ಇದರಿಂದಾಗಿ ಒಬ್ಬ ಸಂಸದ ಪ್ರಧಾನಿಯನ್ನು ಸರಾಸರಿ 9 ಬಾರಿ ಉಲ್ಲೇಖಿಸಿದಂತಾಗಿದೆ ಎಂದು theprint.in ವರದಿ ಮಾಡಿದೆ.

ಬಿಜೆಪಿ ಸಂಸದರು ತಮ್ಮ ಭಾಷಣಗಳಲ್ಲಿ, ಮೋದೀ ಜಿ, ಪ್ರೈಮ್ ಮಿನಿಸ್ಟರ್ ಅಥವಾ ಪ್ರಧಾನ್ ಮಂತ್ರಿ ಎಂದು ಎಷ್ಟು ಬಾರಿ ಹೇಳಿದ್ದಾರೆಂದು theprint.in ವಿಶ್ಲೇಷಿಸಿದೆ. ರಾಜ್ಯಸಭೆಯಲ್ಲಿ ಫೆಬ್ರವರಿ 3ರಿಂದ 5ರ ತನಕ ಚರ್ಚೆ ನಡೆದಿದ್ದರೆ ಲೋಕಸಭೆಯಲ್ಲಿ ಫೆಬ್ರವರಿ 8 ಹಾಗೂ 9ರಂದು ಚರ್ಚೆ ನಡೆದಿತ್ತು.

ಲೋಕಸಭೆಯಲ್ಲಿ ಬಿಜೆಪಿ ಸಂಸದರು ತಮ್ಮ ಭಾಷಣಗಳಲ್ಲಿ ಪ್ರಧಾನಿಯನ್ನು 253 ಬಾರಿ ಉಲ್ಲೇಖಿಸಿದ್ದರೆ ರಾಜ್ಯಸಭೆಯಲ್ಲಿ 167 ಬಾರಿ ಉಲ್ಲೇಖಿಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭ ಸಂಸದರು  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಹಾಗೂ ಇತರ ವಿಚಾರಗಳ ಕುರಿತು ಮಾತನಾಡಲು ಸ್ವತಂತ್ರರಾಗಿದ್ದರೂ ಹೆಚ್ಚಿನ ಬಿಜೆಪಿ ಸಂಸದರು ಪ್ರಧಾನಿ ಮತ್ತು ಅವರ ಕಾರ್ಯಯೋಜನೆಗಳ ಕುರಿತಂತೆಯೇ ಮಾತನಾಡಿದ್ದರು.

ಲೋಕಸಭೆಯಲ್ಲಿ 25 ಬಿಜೆಪಿ ಸಂಸದರು ಮಾತನಾಡಿದ್ದರೆ ಅವರ ಪೈಕಿ ಪಶ್ಚಿಮ ಬಂಗಾಳದ ಹೂಗ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಲಾಕೆಟ್ ಚಟರ್ಜಿ ಅವರು ಗರಿಷ್ಠ 43 ಬಾರಿ ಪ್ರಧಾನಿಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಉಳಿದಂತೆ  ಉತ್ತರ ಪ್ರದೇಶದ ದೊಮರಿಯಗಂಜ್ ಶಾಸಕಿ ಜಗದಂಬಿಕಾ ಪಾಲ್ ಅವರು 27 ಬಾರಿ, ಅಸ್ಸಾಂನ ಮಂಗಲದಾಯಿ ಸಂಸದ ದಿಲೀಪ್ ಸೈಕಿಯಾ 23 ಬಾರಿ,   ರಾಜಸ್ಥಾನದ ಪಾಲಿ ಸಂಸದ, ಮಾಜಿ ಸಚಿವ  ಪಿ.ಪಿ ಚೌಧುರಿ 16 ಬಾರಿ, ಅಲಹಾಬಾದ್ ಸಂಸದೆ ರೀಟಾ ಬಹುಗುಣ  ಅವರು  ಮೋದಿಯನ್ನು ಭಾಷಣದಲ್ಲಿ 14 ಬಾರಿ ಉಲ್ಲೇಖಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ 19 ಬಿಜೆಪಿ ಸಂಸದರ ಪೈಕಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಭಾಷಣದಲ್ಲಿ ಮೋದಿಯನ್ನು ಗರಿಷ್ಠ 22 ಬಾರಿ ಉಲ್ಲೇಖಿಸಿದ್ದಾರೆ.

ಹಿಮಾಚಲದ ರಾಜ್ಯಸಭಾ ಸಂಸದೆ ಇಂದೂ ಬಾಲಸ್ವಾಮಿ ಹಾಗೂ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯನ್ನು ಕ್ರಮವಾಗಿ 19 ಹಾಗೂ 12 ಬಾರಿ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News