ಪಾಕಿಸ್ತಾನಕ್ಕೆ ಸೇನೆಯ ರಹಸ್ಯ ಮಾಹಿತಿ ರವಾನೆ: ಆರೋಪಿ ಈಶ್ವರಚಂದ್ರ ಬೆಹೆರಾಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2021-02-11 14:05 GMT

ಬಾಲಸೋರ್: ಆರು ವರ್ಷಗಳ ಹಿಂದೆ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ವಿಡಿಯೋಗ್ರಾಫರ್‌ ಈಶ್ವರ್‌ ಚಂದ್ರ ಬೆಹೆರಾ ಎಂಬಾತನಿಗೆ ಬಾಲಸೋರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶ ಗಿರಿಜಾ ಪ್ರಸಾದ್ ಮೊಹಾಪಾತ್ರ ಅವರು ಆರೋಪಿ ಈಶ್ವರ್ ಚಂದ್ರ ಬೆಹೆರಾ ವಿರುದ್ಧ 121 (ಎ) (ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡಲು ಪ್ರಯತ್ನಿಸುವುದು), 120 (ಬಿ) (ಕ್ರಿಮಿನಲ್ ಪಿತೂರಿ), ಮತ್ತು ಸೆಕ್ಷನ್ 3,4,5 ಅಧಿಕೃತ ರಹಸ್ಯ ಕಾಯ್ದೆ 1923 ಮೊಕದ್ದಮೆಗಳನ್ನು ಹೂಡಿದೆ. ಜೊತೆಗೆ 10,000ರೂ. ದಂಡ ವಿಧಿಸಿ ಆದೇಶಿಸಿದೆ.

ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ರಾಜ್ಯ ಗುಪ್ತಚರ ವಿಭಾಗದ ಜಂಟಿ ತನಿಖೆಯ ನಂತರ ಬೆಹೆರಾನನ್ನು 2015 ರ ಜನವರಿ 23 ರಂದು ವಿಶೇಷ ಪೊಲೀಸ್ ತಂಡವು ಬಂಧಿಸಿತ್ತು. ಆರೋಪಿ ಈಶ್ವರಚಂದ್ರನನ್ನು ಬಾಲಸೋರ್‌ನಿಂದ ಆತನ ಕಾಂತಿಪುರ ನಿವಾಸಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಪೊಲೀಸರು ಎರಡು ಸೆಲ್ ಫೋನ್, ಕಂಪ್ಯೂಟರ್, ಒಂದು ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಬ್ಯಾಂಕ್ ಪಾಸ್‌ಬುಕ್‌ಗಳು, ಬ್ಯಾಂಕ್ ಖಾತೆ ಸ್ಟೇಟ್‌ ಮೆಂಟ್ ಮತ್ತು ಯುಪಿಎಸ್ ಅನ್ನು ವಶಪಡಿಸಿಕೊಂಡಿದ್ದರು.

ಚಂಡಿಪುರ ಮತ್ತು ಕಲಾಂ ದ್ವೀಪದಲ್ಲಿ ನೆಲೆಗೊಂಡಿರುವ ಕ್ಷಿಪಣಿಗಳು ಮತ್ತು ಪ್ರಮುಖ ರಕ್ಷಣಾ ಸ್ಥಾಪನೆಗಳ ಬಗ್ಗೆ ರಕ್ಷಣಾ ಗೌಪ್ಯತೆ ಮತ್ತು ಮಾಹಿತಿಯನ್ನು ಹಂಚಿಕೊಂಡ ಬೆಹೆರಾ ಅಬುಧಾಬಿ, ಮೀರತ್, ಮುಂಬೈ, ಬಿಹಾರ ಮತ್ತು ಆಂಧ್ರಪ್ರದೇಶದಿಂದ ಹಣವನ್ನು ಪಡೆದಿದ್ದಾರೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಶಂಕಿತ ಐಎಸ್‌ಐ ಏಜೆಂಟರೊಂದಿಗಿನ ಆತನ ಸಂಭಾಷಣೆಯ ಆಡಿಯೊ ಕ್ಲಿಪಿಂಗ್ ಅನ್ನು ಪೊಲೀಸರು ಪತ್ತೆಹಚ್ಚಿದ್ದರು.

ಆರೋಪಿ ಬೆಹೆರಾ ರೆಮುನಾ ಕಾಲೇಜಿನಿಂದ ಪದವಿ ಮುಗಿಸಿದ ಬಳಿಕ 2007 ರ ಆಗಸ್ಟ್‌ನಲ್ಲಿ ಮಾಸಿಕ 8,000 ರೂ.ಗಳ ಸಂಬಳದೊಂದಿಗೆ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಗೆ ಸೇರಿಕೊಂಡಿದ್ದು, ನಿಯಂತ್ರಣ ಗೋಪುರದ ಸಿಸಿಟಿವಿ ವಿಭಾಗದಲ್ಲಿ ಗುತ್ತಿಗೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News