ಮಂಗಳೂರಿಗೆ ರ್‍ಯಾಗಿಂಗ್ ಕಳಂಕ: ಪೊಲೀಸ್ ಆಯುಕ್ತ ಶಶಿಕುಮಾರ್
ಮಂಗಳೂರು, ಫೆ.11: ಮಂಗಳೂರು ನಗರವು ವಿದ್ಯಾಕಾಶಿಯೆಂದು ಪ್ರಖ್ಯಾತಿಗಳಿಸಿದೆ. ರಾಜ್ಯವಷ್ಟೇ ಅಲ್ಲದೆ, ದೇಶ-ವಿದೇಶದಿಂದಲೂ ಇಲ್ಲಿಗೆ ಶಿಕ್ಷಣ ಅರಸಿ ಬರುತ್ತಾರೆ. ಇಂತಹ ಕಳಂಕ ನಮಗೆ ಬೇಡ. ಎಲ್ಲ ವಿದ್ಯಾರ್ಥಿಗಳು ಸಹೋದರರಂತೆ ಇದ್ದು, ಶಿಕ್ಷಣ ಪೂರೈಸಿ ತೆರಳಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಹಿರಿಯ ವಿದ್ಯಾರ್ಥಿಗಳು ಶೋಕಿಗಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳಬಾರದು. ಎಚ್ಚರಿಕೆಯಿಂದ ಇರಬೇಕು. ಹೊಸ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳಬೇಕೇ ಹೊರತು ಹೀಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾವುದೇ ಕಾಲೇಜಿನಲ್ಲಿ ರ್‍ಯಾಗಿಂಗ್ ಕಂಡುಬಂದಲ್ಲಿ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ, ಆಡಳಿತ ಸಂಸ್ಥೆ, ಶಿಕ್ಷಕರು ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದು. ಸಹಿಷ್ಣುತೆ ಕಾಪಾಡಲು ಪೊಲೀಸ್ ಇಲಾಖೆ ಸದಾಸಿದ್ಧ ಎಂದು ಹೇಳಿದರು.
ರ್‍ಯಾಗಿಂಗ್ ಅತಿರೇಕಕ್ಕೆ ಹೋದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳೂ ನಮ್ಮ ಮುಂದಿವೆ. ಚೆಲ್ಲಾಟಕ್ಕೆ ಆರಂಭವಾದುದು ದುರಂತದಲ್ಲಿ ಅಂತ್ಯವಾಗಬಾರದು ಎಂದು ಹೇಳಿದರು.
ಮಂಗಳೂರು ನಗರದಲ್ಲಿ ಎಂಟು ಮೆಡಿಕಲ್ ಕಾಲೇಜು, 12 ಇಂಜಿನಿಯರಿಂಗ್ ಕಾಲೇಜು, 30ಕ್ಕೂ ಹೆಚ್ಚು ವೃತ್ತಿಪರ ಕೋರ್ಸ್‌ನ ಕಾಲೇಜುಗಳು, 900ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿವೆ. ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಕಲಿಯಲು ಬಂದಿರುತ್ತಾರೆ. ಅವರ ಶಿಕ್ಷಣ ಪೂರೈಸಿ ವಾಪಸಾಗಬೇಕು ವಿನಃ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ರ್‍ಯಾಗಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.