ಉತ್ತರಾಖಂಡ ದುರಂತ:ತಪೋವನ ಸುರಂಗದಲ್ಲಿ ಅಡಚಣೆಗಳ ನಡುವೆಯೇ ಮುಂದುವರಿದಿರುವ ರಕ್ಷಣಾ ಕಾರ್ಯಾಚರಣೆ

Update: 2021-02-11 14:48 GMT

ಡೆಹ್ರಾಡೂನ್,ಫೆ.11: ನೀರ್ಗಲ್ಲು ಸ್ಫೋಟದಿಂದ ಹಿಮಪ್ರವಾಹ ಉಂಟಾಗಿದ್ದ ರವಿವಾರದಿಂದ ತಪೋವನ ವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 25ರಿಂದ 35 ಜನರ ಜೀವ ಉಳಿಸಲು ವ್ಯತ್ಯಯಗಳ ನಡುವೆಯೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಗುರುವಾರ ಧೌಲಿಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದರಿಂದ ಸುರಂಗದಲ್ಲಿ ಕಾರ್ಯನಿರತರಾಗಿದ್ದ ರಕ್ಷಣಾ ಸಿಬ್ಬಂದಿಗಳು ಹೊರಗೆ ಧಾವಿಸುವಂತಾಗಿತ್ತು ಮತ್ತು ಕೆಸರಿನ ನಡುವೆಯೇ ಕೊರೆಯಲು ಬಳಸಲಾಗಿದ್ದ ಭಾರೀ ಯಂತ್ರೋಪಕರಣಗಳನ್ನು ಕಾರ್ಯಾಚರಣೆಯಿಂದ ಹಿಂದೆಗೆದುಕೊಳ್ಳಲಾಗಿತ್ತು. ಬಳಿಕ ಮತ್ತೆ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಸುರಂಗದಲ್ಲಿಯ ರಾಶಿ ರಾಶಿ ಕೆಸರನ್ನು ತೆಗೆಯುವ ವ್ಯಾಪಕ ಪ್ರಯತ್ನದ ಬಳಿಕ ಒಳಗೆ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರಿಗೆ ಆಮ್ಲಜನಕ ಸಿಲಿಂಡರ್‌ನಂತಹ ಜೀವರಕ್ಷಕ ಸಾಧನಗಳನ್ನು ತಲುಪಿಸಲು ರಕ್ಷಣಾ ಸಿಬ್ಬಂದಿಗಳು ಕೆಸರಿನಲ್ಲಿ ರಂಧ್ರಗಳನ್ನು ಕೊರೆಯುವ ಕೆಲಸವನ್ನಾರಂಭಿಸಿದ್ದರು. ನದಿನೀರಿನ ಮಟ್ಟವು ಏಕಾಏಕಿ ಏರಿದ ಪರಿಣಾಮ ಅವರು ತಮ್ಮ ಯಂತ್ರೋಪಕರಣಗಳೊಂದಿಗೆ ಹೊರಕ್ಕೆ ಬಂದಿದ್ದರು ಮತ್ತು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಕೆಲ ಸಮಯದ ಬಳಿಕ ರಕ್ಷಣಾ ತಂಡಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದ್ದು,ಜೋಶಿಮಠದಲ್ಲಿ ಸೀಮಿತ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದರು.

ಸುಮಾರು 12-13 ಮೀ.ಗಳಷ್ಟು ಕೆಳಗಿರುವ ಕೆಸರು ತುಂಬಿದ ಸುರಂಗದಲ್ಲಿ ಇಣುಕಿ ನೋಡಲು ರಂಧ್ರಗಳನ್ನು ಕೊರೆಯುವ ಕೆಲಸವನ್ನು ನಸುಕಿನ ಎರಡು ಗಂಟೆಗೆ ಆರಂಭಿಸಲಾಗಿತ್ತು. ಕೆಸರು ಮತ್ತು ಹೂಳಿನ ನಿರಂತರ ಪ್ರವಾಹವು ರಕ್ಷಣಾ ತಂಡಗಳು ಮತ್ತು ಒಳಗೆ ಸಿಲುಕಿರುವವರ ನಡುವೆ ಅಡ್ಡಿಯಾಗಿದೆ. ಹೀಗಾಗಿ ಕಾರ್ಯತಂತ್ರವನ್ನು ಬದಲಿಸಲಾಗಿದೆ ಎಂದು ಐಟಿಬಿಪಿಯ ವಕ್ತಾರ ವಿವೇಕಕುಮಾರ ಪಾಂಡೆ ಅವರು ದಿಲ್ಲಿಯಲ್ಲಿ ತಿಳಿಸಿದರು.

ರಂಧ್ರಗಳನ್ನು ಕೊರೆಯುವ ಮೂಲಕ ಸುರಂಗದಲ್ಲಿ ಸಿಕ್ಕಿಹಾಕಿಕೊಂಡವರಿಗೆ ಜೀವರಕ್ಷಕ ಸಾಧನಗಳನ್ನು ತಲುಪಿಸಲು ಸದ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಗಡ್ವಾಲ್ ವಿಭಾಗಾಧಿಕಾರಿ ರವಿನಾಥ ರಮಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News