ಎವರೆಸ್ಟ್ ಹತ್ತದೆ ಸುಳ್ಳು ಹೇಳಿ ಪ್ರಮಾಣ ಪತ್ರ: ಇಬ್ಬರು ಭಾರತೀಯ ಪರ್ವತಾರೋಹಿಗಳಿಗೆ 6 ವರ್ಷ ನಿಷೇಧ
ಕಠ್ಮಂಡು (ನೇಪಾಳ), ಫೆ. 11: 2016ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿರುವುದಾಗಿ ಸುಳ್ಳು ಹೇಳಿದ ಇಬ್ಬರು ಭಾರತೀಯ ಪರ್ವತಾರೋಹಿಗಳು ಮತ್ತು ಅವರ ತಂಡದ ನಾಯಕನಿಗೆ ನೇಪಾಳವು ಆರು ವರ್ಷಗಳ ನಿಷೇಧ ಹೇರಿದೆ. ಈ ಅವಧಿಯಲ್ಲಿ ಅವರು ನೇಪಾಳದಲ್ಲಿ ಯಾವುದೇ ಪರ್ವತಾರೋಹಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
2016ರ ಪರ್ವತಾರೋಹಣ ಋತುವಿನಲ್ಲಿ ಭಾರತೀಯರಾದ ನರೇಂದ್ರ ಸಿಂಗ್ ಯಾದವ್ ಮತ್ತು ಸೀಮಾ ರಾಣಿ ಗೋಸ್ವಾಮಿ ಶಿಖರವನ್ನು ತಲುಪಲು ವಿಫಲರಾದರೂ ಅವರಿಗೆ ಪ್ರಮಾಣಪತ್ರಗಳನ್ನು ನೀಡಲಾಗಿತ್ತು ಎಂದು ನೇಪಾಳದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಿಕ ವಾಯುಯಾನ ಸಚಿವಾಲಯದ ವಕ್ತಾರರನ್ನು ಉಲ್ಲೇಖಿಸಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಅವರು ಪ್ರವಾಸೋದ್ಯಮ ಇಲಾಖೆಗೆ ಸುಳ್ಳು ಮಾಹಿತಿಗಳನ್ನು ನೀಡಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದರು.
ಅವರ ಪ್ರಮಾಣಪತ್ರಗಳನ್ನು ರದ್ದುಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅವರ ನಕಲಿ ಆರೋಹಣದ ಬಗ್ಗೆ ದೂರುಗಳು ಬಂದ ಬಳಿಕ, ಸಚಿವಾಲಯವು ತನಿಖೆಗಾಗಿ ಸಮಿತಿಯೊಂದನ್ನು ನೇಮಿಸಿತ್ತು. ಅವರು ಸುಳ್ಳು ಮಾಹಿತಿಗಳನ್ನು ನೀಡಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂಬುದಾಗಿ ಸಮಿತಿ ಹೇಳಿದೆ.