×
Ad

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತೀ ಜಿಲ್ಲೆಯಲ್ಲಿ ಐಟಿಐ: ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ

Update: 2021-02-11 20:30 IST

ಕೊಣಾಜೆ, ಫೆ.11: ರಾಜ್ಯದಲ್ಲಿ ಈಗಾಘಲೆ ಮೊರಾರ್ಜಿ ದೇಸಾಯಿ ಪ್ರೌಢಶಾಲೆ, ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಅದರೊಂದಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ, ಕೌಶಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಉದ್ಯೋಗ ಆಧಾರಿತ (ಜಾಬ್ ಓರಿಯೆಂಟಡ್) ಐಟಿಐ ಶಿಕ್ಷಣ ಸಂಸ್ಥೆಗಳನ್ನು ಪ್ರತೀ ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು. ಅಲ್ಲದೆ ರಾಜ್ಯದ ನಾಲ್ಕು ವಿಭಾಗ ಮಟ್ಟದಲ್ಲಿ ಪಾಲಿಟೆಕ್ನಿಕ್, ಡಿಪ್ಲೊಮಾ ಕಾಲೇಜುಗಳನ್ನು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಣಾಜೆ ಮತ್ತು ಸರಕಾರಿ ಮುಸ್ಲಿಂ ವಸತಿ ಶಾಲೆ ಮಂಜನಾಡಿ ಇಲ್ಲಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಕೊಣಾಜೆಯಲ್ಲಿ ನಿರ್ಮಿಸಲಾಗುವ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು, ಫರಂಗಿಪೇಟೆ ಸಮೀಪದ ಪುದುವಿನಲ್ಲಿ ನಿರ್ಮಿಸಲಾಗುವ ಮೌಲಾನಾ ಆಝಾದ್ ಮಾದರಿ ಶಾಲೆ, ಬೋಳಿಯಾರ್‌ನಲ್ಲಿ ನಿರ್ಮಿಸಲಾಗುವ ಮೌಲಾನಾ ಆಝಾದ್ ಮಾದರಿ ಶಾಲೆಗಳ ಕಟ್ಟಡಗಳಿಗೆ ಶಂಕುಸ್ಥಾಪನೆಯನ್ನು ಗುರುವಾರ ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೆರವೇರಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರಿಗೆ ಸ್ವಉದ್ಯೋಗ ಸಹಿತ ಹಲವು ವಿಭಾಗಗಳು ಸೇರಿದಂತೆ ಸಾಲ ಸೌಲಭ್ಯ ಪಡೆಯಲು ಬ್ಯಾಂಕ್ ಲಿಂಕೇಜ್ ಮತ್ತಿತರ ತೊಡಕುಗಳು ಎದುರಾಗುತ್ತಿವೆ. ಆದ್ದರಿಂದ ಉದ್ಯೋಗಕ್ಕೆ ಸಬ್ಸಿಡಿ ಸಾಲವನ್ನು ನೀಡುವ ಯೋಜನೆಯನ್ನು ಬ್ಯಾಂಕ್ ಲಿಂಕ್ ಇಲ್ಲದೆ ಎರಡು ಲಕ್ಷ ರೂ. ಸಾಲ ಕೊಡಲು ವ್ಯವಸ್ಥೆ ಮಾಡಿ ಸಾಲದ ವ್ಯವಸ್ಥೆ ಸರಳೀಕರಣ ಮಾಡಲಾಗುವುದು ಎಂದು ಸಚಿವ ಶ್ರೀಮಂತ ಬಾಳಸಾಹೇಬ ಪಾಟೀಲ ಹೇಳಿದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಇತರ ಸಾಮಾನ್ಯ ಸಿಲೆಬಸ್ ಸೇರಿಸಿ ಎಸೆಸ್ಸೆಲ್ಸಿಗೆ ಸಮಾನ ಮಾನ್ಯತೆ ಸಿಗುವ ವ್ಯವಸ್ಥೆ ಮಾಡುವ ಬಗ್ಗೆ ಮುಸ್ಲಿಂ ಸಮುದಾಯದ ನಾಯಕರು, ಚಿಂತಕರು, ವಿದ್ವಾಂಸರ ಜೊತೆ ಚರ್ಚೆ ನಡೆಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಐಟಿಐ, ಕಾಲೇಜು, ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಉದ್ಯೋಗ ಅವಕಾಶ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಟ್ಟಡಗಳು ತಯಾರಾಗಿವೆ. ಬಡತನ, ಕಷ್ಟಗಳನ್ನು ದೂರ ಮಾಡಿ ಸ್ವಾಭಿಮಾನದ ಬದುಕು ರೂಪಿಸಲು ಶಿಕ್ಷಣದಿಂದಲೇ ಸಾಧ್ಯ. ಬಡತನದಲ್ಲಿ ಹುಟ್ಟಬಹುದು. ಆದರೆ ಬಡತನದಲ್ಲೇ ಸಾಯಬೇಕೆಂದೇನಿಲ್ಲ. ಕ್ಷೇತ್ರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯದ ಮಕ್ಕಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತಾಗಿದೆ ಎಂದರು.

ಕಳೆದ ಬಾರಿ ರಾಜ್ಯದಲ್ಲಿ 8 ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿತ್ತು. ಅದರಲ್ಲಿ 3 ವಸತಿ ಶಾಲೆಗಳು ಮಂಗಳೂರು ಕ್ಷೇತ್ರದಲ್ಲಿ ರುವುದು ವಿಶೇಷ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಸುಮಾರು 40 ಕೋ.ರೂ. ವೌಲ್ಯದ ಕಟ್ಟಡಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿರುವುದು ಇದೇ ಪ್ರಥಮ ಎಂದು ಯು.ಟಿ.ಖಾದರ್ ನುಡಿದರು.

ಅತಿಥಿಗಳಾಗಿ ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ಬೆಂಗಳೂರು ಅಧ್ಯಕ್ಷ ಸಂತೋಷ ರೈ ಬೋಳಿಯಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತಾಪಂ ಸದಸ್ಯರಾದ ಪದ್ಮಾವತಿ ಎಸ್. ಅಬ್ದುಲ್ ಜಬ್ಬಾರ್ ಬೋಳಿಯಾರ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಂಜನಾಡಿ ಗ್ರಾಪಂ ಅಧ್ಯಕ್ಷೆ ನಸ್ರೀನಾ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷರಾದ ಶೌಕತ್ ಆಲಿ, ಅಚ್ಯುತ ಗಟ್ಟಿ, ನಝರ್ ಷಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಎನ್ ಎಸ್ ಕರೀಂ., ಅಲ್ಪಸಂಖ್ಯಾತ ಇಲಾಖೆಯ ಫಯಾಜುದ್ದೀನ್, ಮಹಾಬಲೇಶ್ವರ ನಾಯ್ಕ್ ನಾಗಪ್ರಸಾದ್ ರೆಡ್ಡಿ ಉಪಸ್ಥಿತರಿದ್ದರು.

ಮೆಹಬೂಬ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮರಬ್ಬ ಮಾಸ್ಟರ್ ವಂದಿಸಿದರು. ಸೀತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News