ಬ್ರಿಟನ್ ಕೊರೋನ ವೈರಸ್ ಪ್ರಭೇದ ಮತ್ತೊಮ್ಮೆ ರೂಪಾಂತರ
ಲಂಡನ್, ಫೆ. 11: ಬ್ರಿಟನ್‌ನ ಕೆಂಟ್ ವಲಯದಲ್ಲಿ ಮೊದಲು ಕಾಣಿಸಿಕೊಂಡ ಕೊರೋನವೈರಸ್ ಪ್ರಭೇದವು ಈಗ ಲಭ್ಯವಿರುವ ಲಸಿಕೆಗಳ ಕಾರ್ಯವಿಧಾನದ ಮೇಲೆ ಪರಿಣಾಮ ಬೀರಬಹುದು ಎಂದು ಬ್ರಿಟನ್‌ನ ವಂಶವಾಹಿ ನಿಗಾ ಸಂಸ್ಥೆಯಾಗಿರುವ ‘ಕೋವಿಡ್-19 ಜನೋಮಿಕ್ಸ್ ಯುಕೆ ಕನ್ಸಾರ್ಟಿಯಮ್’ ನಿರ್ದೇಶಕಿ ಶರಾನ್ ಪೀಕಾಕ್ ಹೇಳಿದ್ದಾರೆ.
ಈ ಪ್ರಭೇದದ ಕೊರೋನ ವೈರಸ್ ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡಿದೆ ಹಾಗೂ ಅದು ಜಗತ್ತಿನಾದ್ಯಂತ ವ್ಯಾಪಿಸುವ ದಿನಗಳು ದೂರವಿಲ್ಲ ಎಂದಿದ್ದಾರೆ.
ಜಗತ್ತಿನಾದ್ಯಂತ ಕೊರೋನ ವೈರಸ್‌ಗೆ ಈಗಾಗಲೇ ಸುಮಾರು 23.5 ಲಕ್ಷ ಜನರು ಬಲಿಯಾಗಿದ್ದಾರೆ ಹಾಗೂ ನೂರಾರು ಕೋಟಿ ಜನರ ಬದುಕು ಅಸ್ತವ್ಯಸ್ತವಾಗಿದೆ.
ಆದರೆ, ವೈರಸ್‌ನ ಸಾವಿರಾರು ನೂತನ ಪ್ರಭೇದಗಳ ಪೈಕಿ ಕೆಲವು ಪ್ರಭೇದಗಳಿಗೆ ಈಗ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯಾಗಲಾರವು ಎಂಬ ಆತಂಕ ಎದುರಾಗಿದೆ. ಒಂದೋ ಲಸಿಕೆಗಳಲ್ಲಿ ಸುಧಾರಣೆ ತರಬೇಕು ಅಥವಾ ಜನರು ಇನ್ನೊಂದು ಸುತ್ತಿನ ಲಸಿಕೆಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.
‘‘ಹಲವು ವಾರಗಳು ಮತ್ತು ತಿಂಗಳುಗಳಿಂದ ಹರಡುತ್ತಿರುವ 1.1.7 ಕೊರೋನ ವೈರಸ್ ಪ್ರಭೇದಕ್ಕೆ ಈಗ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ಆದರೆ ಆ ಪ್ರಭೇದವು ಮತ್ತೊಮ್ಮೆ ರೂಪಾಂತರಗೊಳ್ಳಲು ಆರಂಭಿಸಿದೆ ಎನ್ನುವುದು ಕಳವಳದ ವಿಷಯವಾಗಿದೆ. ರೂಪಾಂತರಗೊಂಡ ಹೊಸ ಪ್ರಭೇದದ ವಿರುದ್ಧ ಈಗ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯಾಗಲಾರವು ಎಂಬ ಭೀತಿ ವ್ಯಕ್ತವಾಗಿದೆ’’ ಎಂದು ಬಿಬಿಸಿಯೊಂದಿಗೆ ಮಾತನಾಡಿದ ಪೀಕಾಕ್ ಹೇಳಿದರು.