×
Ad

ಮೃತಪಟ್ಟ ರೈತರಿಗೆ ಸಂಸತ್‌ ನಲ್ಲಿ ಮೌನಪ್ರಾರ್ಥನೆ: ಎದ್ದು ನಿಲ್ಲದೇ ಗದ್ದಲ ಸೃಷ್ಟಿಸಿದ ಬಿಜೆಪಿ ಸಂಸದರು

Update: 2021-02-11 20:41 IST

ಹೊಸದಿಲ್ಲಿ: ಸಂಸತ್‌ ಕಲಾಪ ನಡೆಯುತ್ತಿರುವ ಮಧ್ಯೆ ಮೃತ ರೈತರಿಗೋಸ್ಕರ ಮೌನ ಪ್ರಾರ್ಥನೆಯನ್ನು ನಡೆಸುವ ಸಂದರ್ಭ ಬಿಜೆಪಿ ಸಂಸದರು ಗದ್ದಲ ಉಂಟು ಮಾಡಿದ್ದಾರೆಂದು ಕಾಂಗ್ರೆಸ್‌ ಪಕ್ಷವು ಆರೋಪ ವ್ಯಕ್ತಪಡಿಸಿದೆ. ಈ ಕುರಿತಾದಂತೆ ತನ್ನ ಟ್ವಿಟರ್‌ ಖಾತೆಯಲ್ಲಿ ಫೋಟೊ ಪ್ರಕಟಿಸಿದೆ.

ಪ್ರತಿಭಟನಾನಿರತರಾಗಿರುವ ರೈತರಲ್ಲಿ ಇದುವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ರೈತರು ಹಲವು ಕಾರಣಗಳಿಂದ ಮೃತಪಟ್ಟಿದ್ದಾರೆ. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಸಂಸತ್‌ ನಲ್ಲಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಉಳಿದ ಪಕ್ಷದವರೆಲ್ಲಾ ಎದ್ದು ನಿಂತು ಮೌನವಾಗಿ ಗೌರವ ಸೂಚಿಸಿದರೆ, ಬಿಜೆಪಿ ಸಂಸದರು ಮಾತ್ರ ಮೇಜು ಕುಟ್ಟುತ್ತಾ ಗದ್ದಲವೆಬ್ಬಿಸಿದ್ದಾರೆ, ಮಾತ್ರವಲ್ಲದೇ ಎದ್ದು ನಿಂತು ಗೌರವವನ್ನೂ ಸೂಚಿಸಿಲ್ಲ. ದೇಶವು ಇದನ್ನು ಎಂದಿಗೂ ಮರೆಯುವುದಿಲ್ಲ ಎಂದು ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

“ಬಿಜೆಪಿಯವರು ಮತ್ತು ಮೋದಿ ಸರ್ಕಾರ ಏಕೆ ಎದ್ದು ನಿಲ್ಲಬೇಕು? ಅವರು ಈ ಕುರಿತಾದಂತೆ ಏನೂ ಮಾತನಾಡುವುದಿಲ್ಲ. ಅವರಿಗೆ ಅದರ ಅಗತ್ಯವೂ ಇಲ್ಲ. ದೇಶದಲ್ಲಿ ಯುವಜನರು ಉದ್ಯೋಗರಹಿತರಾಗಿದ್ದಾರೆ. ಎಲ್ಲ ಕ್ಷೇತ್ರಗಳೂ ಬಲ ಕಳೆದುಕೊಂಡಿದೆ. ಮೋದಿಯ ನೀತಿ ನಿಯಮಗಳು ಕೇವಲ ಶ್ರೀಮಂತರಿಗೆ ಮಾತ್ರ ಅನುಕೂಲಕರವಾಗಿದೆ” ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News