ಜಿನ್‌ಪಿಂಗ್ ಜೊತೆ ಅಧ್ಯಕ್ಷ ಬೈಡನ್‌ರ ಮೊದಲ ಟೆಲಿಫೋನ್ ಮಾತುಕತೆ

Update: 2021-02-11 16:38 GMT

 ವಾಶಿಂಗ್ಟನ್, ಫೆ. 11: ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೋ ಬೈಡನ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಬುಧವಾರ ಮೊದಲ ಟೆಲಿಫೋನ್ ಮಾತುಕತೆ ನಡೆಸಿದ್ದು, ಮಾನವಹಕ್ಕುಗಳ ಉಲ್ಲಂಘನೆ, ವ್ಯಾಪಾರ ಸಮರ ಮತ್ತು ಪ್ರಾದೇಶಿಕ ತಂಟೆಕೋರತನದ ಬಗ್ಗೆ ಧ್ವನಿ ಎತ್ತಿದ್ದಾರೆ.

  ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ಚೀನಾದ ವಿರುದ್ಧ ಕಠಿಣ ನಿಲುವು ತಳೆದಿತ್ತು. ಚೀನಾ ವಿರುದ್ಧ ಟ್ರಂಪ್ ಸರಕಾರ ದಂಡನಾ ಆಮದು ತೆರಿಗೆಯನ್ನು ವಿಧಿಸಿತ್ತು ಹಾಗೂ ಅದು ನಡೆಸಿದ ಮಾನವಹಕ್ಕು ಉಲ್ಲಂಘನೆಗಳನ್ನು ತೀವ್ರವಾಗಿ ಖಂಡಿಸಿತ್ತು.

 ಚೀನಾಕ್ಕೆ ಸಂಬಂಧಿಸಿ ಟ್ರಂಪ್ ಸರಕಾರದ ನೀತಿಯನ್ನೇ ಮುಂದುವರಿಸುವಂತೆ ಬೈಡನ್ ಸರಕಾರ ದೇಶದ ಒಳಗಿನಿಂದ ಹಾಗೂ ಹೊರಗಿನಿಂದ ಒತ್ತಡವನ್ನು ಎದುರಿಸುತ್ತಿದೆ. ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿನ ಉಯಿಘರ್ ಮುಸ್ಲಿಮರ ಮೇಲೆ ಅದು ನಡೆಸುತ್ತಿದೆಯೆನ್ನಲಾದ ದೌರ್ಜನ್ಯ ಹಾಗೂ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಅದು ನಡೆಸುತ್ತಿರುವ ಪ್ರಯತ್ನಗಳಿಗಾಗಿ ಅದನ್ನು ಉತ್ತರದಾಯಿಯನ್ನಾಗಿಸಲು ಪಾಶ್ಚಿಮಾತ್ಯ ದೇಶಗಳು ಮುಂದಾಗಿವೆ. ಅದೂ ಅಲ್ಲದೆ, ತೈವಾನ್ ವಿರುದ್ಧ ಚೀನಾ ಕತ್ತಿಮಸೆಯುತ್ತಿರುವುದನ್ನು ಈ ದೇಶಗಳು ಖಂಡಿಸಿವೆ.

ಚೀನಾದ ಬಲವಂತ ಹಾಗೂ ನ್ಯಾಯೋಚಿತವಲ್ಲದ ಆರ್ಥಿಕ ಚಟುವಟಿಕೆಗಳು, ಹಾಂಕಾಂಗ್‌ನಲ್ಲಿ ಅದು ನಡೆಸುತ್ತಿರುವ ದಮನ ಕಾರ್ಯಾಚರಣೆ, ಕ್ಸಿನ್‌ಜಿಯಾಂಗ್‌ನಲ್ಲಿ ಅದು ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆ ಹಾಗೂ ತೈವಾನ್ ಸೇರಿದಂತೆ ವಲಯದಲ್ಲಿ ಅದು ನಡೆಸುತ್ತಿರುವ ಪಾಳೇಗಾರಿಕೆಯ ಬಗ್ಗೆ ಬೈಡನ್ ತನ್ನ ಕಳವಳ ವ್ಯಕ್ತಪಡಿಸಿದರು ಎಂದು ಶ್ವೇತಭವನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News