×
Ad

ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ -ಅಭಯಚಂದ್ರ ಜೈನ್

Update: 2021-02-11 23:11 IST

ಮೂಡುಬಿದಿರೆ: ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

 ಅವರು ಗುರುವಾರ ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯುಪಿಎ ಸರಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾತೈಲ ಬೆಲೆ ಬ್ಯಾರೆಲ್‍ಗೆ ರೂ 140 ಇದ್ದು ಪೆಟ್ರೋಲ್‍ಗೆ ಲೀಟರ್‍ಗೆ ರೂ 70 ಮತ್ತು ಡಿಸೇಲ್‍ಗೆ ಲೀಟರ್‍ಗೆ ರೂ 60 ಹಾಗೂ ಗ್ಯಾಸ್ ಸಿಲಿಂಡರ್‍ಗೆ ರೂ 280  ಇತ್ತು. ಈಗ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ ರೂ 60 ಕ್ಕೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಲೀಟರ್‍ಗೆ ರೂ 90ಕ್ಕೆ, ಡೀಸೆಲ್ ಬೆಲೆ ಲೀಟರ್‍ಗೆ ರೂ 83ರಕ್ಕೇರಿದೆ. ಮೋದಿಯವರ `ಅಚ್ಚೇ ದಿನ ಆಯಾ' ಅಂದ್ರೆ ಇದೇನಾ ಎಂದು ಅವರು ಪ್ರಶ್ನಿಸಿದರು.

ಬೆಲೆ ಏರಿಕೆಯಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಟೀಕಿಸಿದರು. ಜಿಎಸ್‍ಟಿಯಿಂದ ಕೇಂದ್ರ ಸರಕಾರಕ್ಕೆ ಕೋಟಿಗಟ್ಟಲೆ ಹಣ ಸಂದಾಯವಾಗುತ್ತಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವುದಕ್ಕೆ ಹಿಂದೆ ಬಿಜೆಪಿ ವಿರೋಧಿಸುತ್ತಿತ್ತು. ಈಗ ಕೇಂದ್ರ ಬಿಜೆಪಿ ಸರಕಾರ ಹೆದ್ದಾರಿಯ ಅಲ್ಲಲ್ಲಿ ಟೋಲ್ ಅಳವಡಿಸಿ ದಿನಕ್ಕೆ ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಿದೆ. ಕೇಂದ್ರ ಸರಕಾರದ ನಿಯಮಗಳು ಎಲ್ಲಾ ಕಡೆಯಿಂದಲೂ ಜನಸಾಮಾನ್ಯರಿಗೆ  ಹೊರೆಯಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News