ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ದಲಿತರಿಗೆ ಮೀಸಲಾತಿ ಸೌಲಭ್ಯ ಇಲ್ಲ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Update: 2021-02-12 04:01 GMT
ಕಾನೂನು ಸಚಿವ ರವಿಶಂಕರ್ ಪ್ರಸಾದ್

ಹೊಸದಿಲ್ಲಿ, ಫೆ.12: ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವ ದಲಿತರಿಗೆ ಇನ್ನು ಯಾವುದೇ ಮೀಸಲಾತಿ ಸೌಲಭ್ಯ ಇರುವುದಿಲ್ಲ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಇಂಥ ಮತಾಂತರ ಹೊಂದಿದ ದಲಿತರು, ಮೀಸಲು ಕ್ಷೇತ್ರದಿಂದ ಲೋಕಸಭೆ ಅಥವಾ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶವಿಲ್ಲ ಹಾಗೂ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಪಡೆಯುವಂತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ವಿವರಿಸಿದರು.

ಆದಾಗ್ಯೂ ಹಿಂದೂ, ಸಿಕ್ಖ್ ಅಥವಾ ಬೌದ್ಧ ಧರ್ಮವನ್ನು ಸ್ವೀಕರಿಸುವವರು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ಇರುತ್ತದೆ ಹಾಗೂ ಇತರ ಮೀಸಲಾತಿ ಸೌಲಭ್ಯಗಳು ಸಿಗಲಿವೆ ಎಂದು ಬಿಜೆಪಿ ಸದಸ್ಯ ಜಿಎಲ್‌ವಿ ನರಸಿಂಹ ರಾವ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಸಚಿವರು ಸ್ಪಷ್ಟಪಡಿಸಿದರು.

"ಸಂವಿಧಾನದ (ಪರಿಶಿಷ್ಟ ಜಾತಿಗಳ) ಆದೇಶದ ಪ್ಯಾರಾ 3ರ ಪ್ರಕಾರ ಹಿಂದೂ, ಸಿಕ್ಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮವನ್ನು ಒಪ್ಪಿಕೊಳ್ಳುವವರು ಪರಿಶಿಷ್ಟ ಜಾತಿ ಸದಸ್ಯ ಎನಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.

ಹೀಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವ ದಲಿತರು ಹಾಗೂ ಹಿಂದೂ, ಸಿಕ್ಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ದಲಿತರ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಸಚಿವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News