ರೆಂಜಿಲಾಡಿ: ದಂಪತಿ ಮೇಲೆ ದಾಳಿ ಮಾಡಿದ ಬಳಿಕ ಮರವೇರಿ ಕುಳಿತ ಚಿರತೆ!
ಕಡಬ, ಫೆ.12: ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯಲ್ಲಿ ಇಂದು ಮುಂಜಾವ ದಂಪತಿಯ ಮೇಲೆ ದಾಳಿ ನಡೆಸಿದ ಚಿರತೆ ಮರದ ಮೇಲೆ ಏರಿ ಕುಳಿತಿದ್ದು, ಅದನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರೆಂಜಿಲಾಡಿಯ ಹೇರ ನಿವಾಸಿಗಳಾದ ಚಂದ್ರಶೇಖರ್ ಕಾಮತ್ ಹಾಗೂ ಸೌಮ್ಯಾ ಕಾಮತ್ ಎಂಬವರು ಶುಕ್ರವಾರ ಬೆಳಗಿನ ಜಾವ ತೋಟಕ್ಕೆ ಸ್ಪಿಂಕ್ಲರ್ ಪೈಪ್ ಜೆಟ್ ಬದಲಾಯಿಸಲು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಚಿರತೆಯಿಂದ ತಪ್ಪಿಸಿಕೊಂಡ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಈ ನಡುವೆ ಚಿರತೆಯು ದಾಳಿ ನಡೆಸಿದ ತೋಟದಲ್ಲೇ ಇದ್ದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪಿಲಿಕುಳ ನಿಸರ್ಗ ಧಾಮದ ನುರಿತ ಶೂಟರ್ ಡಾ.ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ. ಸೋನ್ಸ್, ಅರಣ್ಯ ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದೀಗ ಚಿರತೆ ಮರವೇರಿ ಕುಳಿತಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿದ್ದು, ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.