ಮತಾಂತರ ನಿಷೇಧ ಕಾಯ್ದೆಯ ಬಳಿಕ ಮಧ್ಯಪ್ರದೇಶದಲ್ಲಿ ದಿನಕ್ಕೊಂದು ಪ್ರಕರಣ!

Update: 2021-02-12 08:46 GMT

ಭೋಪಾಲ್, ಫೆ.12: ಮಧ್ಯಪ್ರದೇಶ ಸರಕಾರ ಧಾರ್ಮಿಕ ಸ್ವಾತಂತ್ರ್ಯ ಅಧ್ಯಾದೇಶ-2020ನ್ನು ಜಾರಿಗೆ ತಂದ ಮೊದಲ ಒಂದು ತಿಂಗಳಲ್ಲಿ ದಿನಕ್ಕೆ ಸರಾಸರಿ ಒಂದರಂತೆ ʼಬಲವಂತದ ಮತಾಂತರʼ ಪ್ರಕರಣಗಳನ್ನು ದಾಖಲಿಸಿದೆ. "ಜನವರಿಯಲ್ಲಿ ಆಂಗೀಕರಿಸಿದ ಧಾರ್ಮಿಕ ಸ್ವಾತಂತ್ರ್ಯ ಅಧ್ಯಾದೇಶ-2020ರ ಅಡಿಯಲ್ಲಿ 23 ಪ್ರಕರಣಗಳನ್ನು ಜನವರಿಯಲ್ಲಿ ದಾಖಲಿಸಲಾಗಿದೆ" ಎಂದು ಗೃಹಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ. ಈ ಅಧ್ಯಾದೇಶ ಜನವರಿ 9ರಂದು ಜಾರಿಗೆ ಬಂದಿತ್ತು.

ಭೋಪಾಲ್‌ನಲ್ಲಿ ಗರಿಷ್ಠ ಅಂದರೆ ಏಳು ಪ್ರಕರಣಗಳು ದಾಖಲಾಗಿದ್ದು, ಇಂದೋರ್‌ನಲ್ಲಿ ಐದು, ಜಬಲ್ಪುರದಲ್ಲಿ ನಾಲ್ಕು, ರೇವಾ ಹಾಗೂ ಗ್ವಾಲಿಯರ್‌ನಲ್ಲಿ ತಲಾ ಮೂರು ಪ್ರಕರಣಗಳು ದಾಖಲಾಗಿವೆ. "ಇದು ಗಂಭೀರ ಸಮಸ್ಯೆ ಮತ್ತು ಇಂಥ ಶಕ್ತಿಗಳು ದೇಶಾದ್ಯಂತ ಸಕ್ರಿಯವಾಗಿವೆ ಎನ್ನುವುದನ್ನು ಪುನರುಚ್ಚರಿಸುತ್ತೇವೆ" ಎಂದು ಮಿಶ್ರಾ ಹೇಳಿದರು.

ಮೊದಲ ಪ್ರಕರಣ ಜನವರಿ 17ರಂದು ಬರ್ವಾನಿ ಜಿಲ್ಲೆಯ ಪಲ್ಸೂದ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಸೋಹೈಲ್ ಮನ್ಸಿರಿ ಅಲಿಯಾಸ್ ಸನ್ನಿ ಎಂಬಾತ ತನ್ನ ಜಾತಿಯ ವಿಷಯವನ್ನು ಮುಚ್ಚಿಟ್ಟು, ಅನ್ಯ ಕೋಮಿನ ಯುವತಿಗೆ ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆಪಾದಿಸಲಾಗಿತ್ತು. ಇದಾದ ಮೂರು ದಿನ ಬಳಿಕ ರಾಜ್ಯ ರಾಜಧಾನಿಯಲ್ಲಿ ಮೊದಲ 'ಬಲವಂತದ ಮತಾಂತರ' ಪ್ರಕರಣ ದಾಖಲಾಗಿದ್ದು, ಮುಂದಿನ 11 ದಿನದಲ್ಲಿ ಅರು ಪ್ರಕರಣಗಳು ದಾಖಲಾಗಿವೆ.

ಬಹುತೇಕ ಪ್ರಕರಣಗಳಲ್ಲಿ ಯುವತಿಯರು ದೂರು ನೀಡಿದ್ದು, ತಮ್ಮ ಸಂಬಂಧದಲ್ಲಿ ಯುವಕರು ನೈಜ ಜಾತಿಯನ್ನು ಮರೆಮಾಚಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಅಧ್ಯಾದೇಶಕ್ಕೆ ಮಧ್ಯಪ್ರದೇಶ ವಿಧಾನಸಭೆ ಇನ್ನೂ ಅನುಮೋದನೆ ನೀಡಿಲ್ಲ. ಇದರ ಅನ್ವಯ ಬಲವಂತದ ಮತಾಂತರಕ್ಕೆ 1-5 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 25 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಅಥವಾ ಅಪ್ರಾಪ್ತ ವಯಸ್ಸಿನವಳಾಗಿದ್ದರೆ ಆರೋಪಿಗೆ 10 ವರ್ಷ ಜೈಲು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಈ ಹಿಂದೆ ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಸಂದರ್ಭ ಹಲವಾರು ಪ್ರಕರಣಗಳಲ್ಲಿ ಸಂಘಪರಿವಾರ ಸಂಘಟನೆಗಳು ಸೇರಿಕೊಂಡು ಯುವತಿಯರ ಕುಟುಂಬಗಳಿಗೆ ಬೆದರಿಕೆ ನೀಡುವ ಮೂಲಕ ಬಲವಂತವಾಗಿ ದೂರು ದಾಖಲಿಸುತ್ತಿದ್ದರು ಎಂದು timesofindia.com, theprint.in ಸೇರಿದಂತೆ ಹಲವು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News