ಪ್ರಧಾನಿ ಮೋದಿಯ ನಿಂದನೆ ಆರೋಪ: ಗೂಗಲ್ ಸಿಇಒ ಪಿಚೈ ಹೆಸರನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದ ಉತ್ತರಪ್ರದೇಶ ಪೊಲೀಸರು

Update: 2021-02-12 10:27 GMT

ವಾರಣಾಸಿ,ಫೆ.12: ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಲಾಗಿದೆ ಎಂದು ಹೇಳಲಾದ ವೀಡಿಯೋಗೆ  ಸಂಬಂಧಿಸಿದಂತೆ ಕಳೆದ ವಾರ ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ 17 ಮಂದಿ ಇತರರನ್ನು  ಹೆಸರಿಸಿ ಎಫ್‍ಐಆರ್ ದಾಖಲಿಸಿದ್ದು, ನಂತರ ಪಿಚೈ ಮತ್ತು ಇತರ ಗೂಗಲ್ ಉನ್ನತ ಅಧಿಕಾರಿಗಳ ಹೆಸರುಗಳನ್ನು ಅದೇ ದಿನ ಎಫ್‍ಐಆರ್ ನಿಂದ ಕೈಬಿಡಲಾಯಿತು ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಗೂಗಲ್ ಹಾಗೂ ಸಂಸ್ಥೆಯ ಉನ್ನತ ಅಧಿಕಾರಿಗಳ ಪಾತ್ರವೇನಿಲ್ಲ ಎಂದು ತಿಳಿದ ನಂತರ ಅವರ ಹೆಸರುಗಳನ್ನು ಕೈಬಿಡಲಾಯಿತು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಬಂದಿದೆ.

ಮೊದಲು ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ ಹಾಗೂ ನಂತರ ಐದು ಲಕ್ಷ ವೀವ್ಸ್ ಪಡೆದ ವೀಡಿಯೋವನ್ನು ಯುಟ್ಯೂಬ್‍ನಲ್ಲಿ  ನೋಡಿದ ಬಳಿಕ ತನ್ನ ಮೊಬೈಲ್ ಫೋನ್‍ಗೆ 8,500ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದ ನಂತರ ಎಫ್‍ಐಆರ್ ದಾಖಲಾಗಿತ್ತು.

ಪಿಚೈ ಹೊರತಾಗಿ ಗೂಗಲ್ ಇಂಡಿಯಾ ಅಧಿಕಾರಿ ಸಂಜಯ್ ಕುಮಾರ್ ಗುಪ್ತಾ ಅವರ ಹೆಸರನ್ನೂ  ಭೇಲ್‍ಪುರ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿತ್ತು.

ವೀಡಿಯೋದಲ್ಲಿನ ಹಾಡು  ತಯಾರಿಸಿದ ಗಾಝೀಪುರ್ ಮೂಲದ ಸಂಗೀತಗಾರರು, ರೆಕಾರ್ಡಿಂಗ್ ಸ್ಟುಡಿಯೋ ಹಾಗೂ ಒಂದು ಸ್ಥಳೀಯ ಮ್ಯೂಸಿಕ್ ಲೇಬಲ್ ಕಂಪೆನಿಯನ್ನೂ ದೂರಿನಲ್ಲಿ ಹೆಸರಿಸಲಾಗಿತ್ತು. ಐಪಿಸಿ ಸೆಕ್ಷನ್ 504, 506, 120ಬಿ ಹಾಗೂ ಐಟಿ ಕಾಯಿದೆಯ ಸೆಕ್ಷನ್ 67 ಅನ್ವಯ ಪ್ರಕರಣ ದಾಖಲಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News