ಹರೇಕಳ-ಅಡ್ಯಾರ್ ಅಣೆಕಟ್ಟು, ಸೇತುವೆ ಕಾಮಗಾರಿ ಡಿಸೆಂಬರ್ ಗೆ ಪೂರ್ಣ: ಶಾಸಕ ಯು.ಟಿ.ಖಾದರ್

Update: 2021-02-12 12:12 GMT

ಕೊಣಾಜೆ: ಹರೇಕಳ ಕಡವಿನ ಬಳಿಯಿಂದ ಅಡ್ಯಾರ್ ವರೆಗೆ  192.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಶಾಸಕ ಯು.ಟಿ.ಖಾದರ್ ಅವರು ಶುಕ್ರವಾರ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು ಸೇತುವೆ ಮತ್ತು ಅಣೆಕಟ್ಟು ಕಾಮಗಾರಿಯ ಕೆಲಸವು ಭರದಿಂದ ಸಾಗುತ್ತಿದೆ. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಇಷ್ಟು ದೊಡ್ಡ ಸೇತುವೆ ಜೊತಗೆ ಅಣೆಕಟ್ಟು ನಿರ್ಮಾಣವಾಗುತ್ತಿರುವುದು ರಾಜ್ಯದಲ್ಲೇ ಪ್ರಥಮ. ಇದರಲ್ಲಿ ಏಳೂವರೆ ಮೀಟರ್ ಉದ್ದದ ರಸ್ತೆ ಹಾಗೂ ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ಎರಡು ಬದಿಗಳಲ್ಲಿ ಒಂದು ಮೀಟರ್ ಅಗಲ ಒಟ್ಟು ಒಂಭತ್ತೂವರೇ ಮೀಟರ್ ಅಗಲದ ಸೇತುವೆಯಾಗಿದೆ. ಕಾಮಗಾರಿಯು ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಉದ್ಘಾಟನೆ ನಡೆಯಲಿದೆ ಎಂದರು.

ಈ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣದೊಂದಿಗೆ ಮುಡಿಪು, ಕೊಣಾಜೆ ಭಾಗದ ನಾಗರಿಕರಿಗೆ ನಗರ ಸಂಪರ್ಕಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಅಲ್ಲದೆ ತೊಕ್ಕೊಟ್ಟು ದೇರಳಕಟ್ಟೆ ಭಾಗದಲ್ಲಿ ವಾಹನದಟ್ಟಣೆ ಕೂಡಾ ಕಡಿಮೆಯಾಗಬಹುದಾಗಿದೆ. ಅಲ್ಲದೆ ಇಲ್ಲಿಯ ಅಣೆಕಟ್ಟು ನಿರ್ಮಾಣದಿಂದ 18.2ಮಿಲಿಯನ್ ಕ್ಯೂಸೆಕ್ ಮೀಟರ್ ನಮಗೆ ಸಿಹಿನೀರು ಸಿಗುತ್ತದೆ. ಈ ಸಿಹಿನೀರಿನಿಂದ ಉಳ್ಳಾಲ ವ್ಯಾಪ್ತಿಯ ಪ್ರದೇಶಗಳು ಮಾತ್ರವಲ್ಲ ಮಂಗಳೂರು ನಗರಕ್ಕೂ ಮುಂದಿನ ಮೂವತ್ತು ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು.

'ಪ್ರವಾಸೋದ್ಯಮ ಕ್ಷೇತ್ರ ನಿರ್ಮಾಣ'
ಹರೇಕಳ ಅಡ್ಯಾರ್ ಪ್ರದೇಶವು ಬಹಳ ಸುಂದರವಾದ ತಾಣವಾಗಿದ್ದು, ಇಲ್ಲಿ ಡ್ಯಾಂ ಮತ್ತು ಅಣೆಕಟ್ಟು ನಿರ್ಮಾಣದಿಂದ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಪರಿವರ್ತನೆಯಾಗಲಿದೆ. ಬೋಟಿಂಗ್, ಮಕ್ಕಳಿಗೆ ಕ್ರೀಡಾ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲವಾಗಲಿದೆ. ಹಾಗೆಯೇ ಮೀನುಗಾರಿಕೆ ಕ್ಷೇತ್ರದಲ್ಲಿಯು ಅಭಿವೃದ್ಧಿ ಚಟುವಟಿಕೆಗಳಿಗೆ ಉಪಯೋಗವಾಗಲಿದೆ  ಹಾಗೂ ಇಲ್ಲಿಯ ಕೃಷಿ ಜಮೀನುಗಳಿಗೂ ಅನುಕೂಲವಾಗಲಿದ್ದು ಈ ಊರಿಗೆ ಈ ಯೋಜನೆ ಒಂದು ಕೊಡುಗೆಯಾಗಲಿದೆ ಎಂದರು.

ಈ ಯೋಜನೆಯು ಸರ್ಕಾರದ ಪ್ರೊತ್ಸಾಹದೊಂದಿಗೆ ಕಾರ್ಯಕಾರಿ ಅಭಿಯಂತರರು, ಗುತ್ತಿಗೆದಾರರ‌ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನಡೆಯುತ್ತಿದ್ದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ಮೋನು, ಹರೇಕಳ ಗ್ರಾಮ ಪಂಚಾಯತಿಯ ಬದ್ರುದ್ದೀನ್, ಹರೇಕಳ ಪಂಚಾಯತಿ ಮಾಜಿ ಅಧ್ಯಕ್ಷ ಮಹಾಬಲ ಹೆಗ್ಡೆ, ಸಣ್ಣ ನೀರಾವರಿಯೋಜನೆಯ ಎಂಜಿನಿಯರ್ ಗೋಕುಲ್ ದಾಸ್, ಗುರುಮೂರ್ತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗುಲಾಬಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News