×
Ad

ಮಾತೃಭಾಷೆಯ ಶಿಕ್ಷಣ ಪೋಷಕರ ಜವಾಬ್ದಾರಿ: ಮೇಯರ್ ದಿವಾಕರ ಪಾಂಡೇಶ್ವರ

Update: 2021-02-12 18:28 IST

ಮಂಗಳೂರು, ಫೆ.12: ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಕನ್ನಡ ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ 24ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೇ ದಿನ ಶುಕ್ರವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಮಾತೃ ಸಂಸ್ಕೃತಿಯನ್ನು ಮುಂದಿನ ಜನಾಂಗ ಅಳವಡಿಸುವಂತಹ ಕೆಲಸ ಆಗಬೇಕಿದೆ. ಕೊರೋನ ಮುನ್ನೆಚ್ಚರಿಕೆಯೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಮೂರು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ, ಗೋಷ್ಠಿಗಳು ನಡೆಯಲಿದೆ ಎಂದರು.

ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ ಎಂ.ಬಿ. ಪುರಾಣಿಕ್ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.

ಈ ವೇಳೆ ಸಮ್ಮೇಳನಾಧ್ಯಕ್ಷರಾದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಮನಪಾ ಸದಸ್ಯೆ ಜಯಶ್ರೀ ಕುಡ್ವ, ಶಿಕ್ಷಕರಾದ ಶಿವಕುಮಾರ್, ರಾಘವೇಂದ್ರ ರಾವ್ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಸತ್ಯಮೂರ್ತಿ ಸ್ವಾಗತಿಸಿ, ರಮೇಶ್ ಆಚಾರ್ ನಿರೂಪಿಸಿದರು. ಭಾರತ ಸೇವಾದಳದ ಮಂಜೇಗೌಡ ನಿರ್ವಹಿಸಿದರು.
ಡೊಂಗರಕೇರಿ ಕೆನರಾ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News