ಪಂಜಾಬ್ ಮಾಜಿ ಸಿಎಂ ಬಿಯಾಂತ್ ಸಿಂಗ್ ಹಂತಕನ ದಯಾಭಿಕ್ಷೆ ಅರ್ಜಿ ರಾಷ್ಟ್ರಪತಿಗಳ ಬಳಿಯಿದೆ: ಸುಪ್ರೀಂಗೆ ಮಾಹಿತಿ

Update: 2021-02-12 14:05 GMT
ಪಂಜಾಬ್ ಮಾಜಿ ಸಿಎಂ ಬಿಯಾಂತ್ ಸಿಂಗ್ 

ಹೊಸದಿಲ್ಲಿ,ಫೆ.12: ಪಂಜಾಬಿನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಕೋರಿ ಮಾಜಿ ಪಂಜಾಬ್ ಪೊಲೀಸ್ ಕಾನ್‌ಸ್ಟೇಬಲ್ ಬಲವಂತ್ ಎಸ್.ರಾಜೋನಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಿಷಯವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬಳಿಯಿದೆ ಎಂದು ಕೇಂದ್ರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಸಿಕ್ಖರಿಗೆ ಪ್ರತ್ಯೇಕ ರಾಜ್ಯ ‘ಖಲಿಸ್ತಾನ್ ’ಬೇಡಿಕೆ ವಿಷಯದಲ್ಲಿ ರಾಜೋನಾ ಬಿಯಾಂತ್ ಸಿಂಗ್ ಹತ್ಯೆಗೈದಿದ್ದು,ಆತನ ಅರ್ಜಿಯ ಪರಿಶೀಲನೆ ಪ್ರಕ್ರಿಯೆ ಆರಂಭಗೊಂಡಿದೆ ಮತ್ತು ರಾಷ್ಟ್ರಪತಿಗಳು ನಿರ್ಧಾರವೊಂದನ್ನು ಕೈಗೊಳ್ಳಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಹಾಲಿ ಪರಿಸ್ಥಿತಿಯಲ್ಲಿ ಈ ವಿಷಯದಲ್ಲಿ ಕೇಂದ್ರಕ್ಕೆ ಆರು ವಾರಗಳ ಕಾಲಾವಕಾಶ ನೀಡುವಂತೆ ಮೆಹ್ತಾ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.

ಸರ್ವೋಚ್ಚ ನ್ಯಾಯಾಲಯವು ಜ.25ರಂದು ರಾಜೋನಾ ಅರ್ಜಿಯ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರವೊಂದನ್ನು ಕೈಗೊಳ್ಳಲು ಕೊನೆಯ ಅವಕಾಶವನ್ನು ನೀಡಿತ್ತು. ತನ್ನ ಕಕ್ಷಿದಾರ ಕಳೆದ 25 ವರ್ಷಗಳಿಂದಲೂ ಜೈಲಿನಲ್ಲಿದ್ದಾನೆ ಮತ್ತು ಆತನ ದಯಾಭಿಕ್ಷೆ ಅರ್ಜಿ ಕಳೆದ ಒಂಭತ್ತು ವರ್ಷಗಳಿಂದಲೂ ಬಾಕಿಯಿದೆ ಎಂದು ರಾಜೋನಾ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

1995ರಲ್ಲಿ ಪಂಜಾಬ್ ಸಚಿವಾಲಯ ಕಟ್ಟಡದ ಹೊರಗೆ ಸಂಭವಿಸಿದ್ದ ಸ್ಫೋಟದಲ್ಲಿ ಬಿಯಾಂತ್ ಸಿಂಗ್ ಮತ್ತು ಇತರ 16 ಜನರು ಕೊಲ್ಲಲ್ಪಟ್ಟಿದ್ದರು.

ಮರಣದಂಡನೆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಕೋರಿ ರಾಜೋನಾ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಜ.26ಕ್ಕೆ ಮೊದಲು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಜ.8ರಂದು ಕೇಂದ್ರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News