×
Ad

ಬಿಜೆಪಿಯಿಂದ ಜಗದೀಶ್ ಅಧಿಕಾರಿ ಉಚ್ಚಾಟನೆಗೆ ಆಗ್ರಹಿಸಿ ಧರಣಿ: ಜೆಡಿಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2021-02-12 19:36 IST

ಮಂಗಳೂರು, ಫೆ.12: ಬಿಲ್ಲವ ಸಮಾಜ ಹಾಗೂ ಕೋಟಿ ಚೆನ್ನಯರನ್ನು ಅವಮಾನಿಸಿದ ಆರೋಪ ಹೊತ್ತಿರುವ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶುಕ್ರವಾರ ಸಂಜೆ ನಡೆಯಿತು.

ನಗರದ ಪಿವಿಎಸ್ ಕಲಾಕುಂಜ ರಸ್ತೆ ಕಡೆಯಿಂದ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಹಾಗೂ 'ಜಗದೀಶ್ ಅಧಿಕಾರಿ ಉಚ್ಛಾಟಿಸಬೇಕು’ ಎಂಬ ಘೋಷಣೆ ಕೂಗುತ್ತಾ ಬಂದರು. ಈ ನಡುವೆ ಪೊಲೀಸರು ರಸ್ತೆ ಬಂದ್ ಮಾಡಿ, ಬ್ಯಾರಿಕೇಡ್ ಅಳವಡಿಸಿದ್ದರು.

ಪ್ರತಿಭಟನಾಕಾರರು ಮುಂದೆ ಸಾಗದಂತೆ ಪೊಲೀಸರು ರಸ್ತೆಗೆ ಅಡ್ಡವಾಗಿ ನಿಂತಿದ್ದರು. ಆದಾಗ್ಯೂ, ಪೊಲೀಸರನ್ನು ದಾಟಿಕೊಂಡು ಹೋಗಲು ಮುಂದಾದರು. ಬಿಜೆಪಿ ಕಚೇರಿಯತ್ತ ಮುನ್ನುಗ್ಗಲು ಯತ್ನಿಸಿದ ಜೆಡಿಎಸ್‌ನ ಜಿಲ್ಲಾ ಮುಖಂಡರಾದ ಅಕ್ಷಿತ್ ಸುವರ್ಣ, ರತೀಶ್ ಕರ್ಕೆರ, ಹಿತೇಶ್ ರೈ, ಡಿ.ಬಿ. ಹಮ್ಮಬ್ಬ, ಪುಷ್ಪರಾಜ್, ಸತ್ತಾರ್ ಬಂದರ್, ಲಿಖಿತ್ ರಾಜ್ ಸಹಿತ ಸುಮಾರು 20ಕ್ಕೂ ಅಧಿಕ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸ್ ಕಾಯ್ದೆ 71ರ ಪ್ರಕಾರ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಪೊಲೀಸರಿಂದ ಯಾವುದೇ ಪರವಾನಿಗೆ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ.

ಜಿಲ್ಲಾ ಬಿಜೆಪಿಯ ಕಚೇರಿಯ ಮುಂಭಾಗ ಹಾಗೂ ಓಶಿಯನ್ ಪರ್ಲ್ ಹೊಟೇಲ್ ಸಮೀಪದಲ್ಲಿ 100ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಮಂಗಳೂರು ನಗರ ಕೇಂದ್ರ ಎಸಿಪಿ ಜಗದೀಶ್, ಇನ್‌ಸ್ಪೆಕ್ಟರ್‌ಗಳಾದ ಗೋವಿಂದರಾಜ್, ಲೊಕೇಶ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News