ಹುಟ್ಟುಹಬ್ಬದ ಪಾರ್ಟಿಯ ಬಳಿಕ ಯುವಕನ ಹತ್ಯೆ: ಕುಟುಂಬಸ್ಥರಿಂದ ಕೋಮುದ್ವೇಷದ ಆರೋಪ

Update: 2021-02-12 14:31 GMT

ಹೊಸದಿಲ್ಲಿ: ರಾಜಧಾನಿಯಲ್ಲಿ ಬುಧವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿ ನಂತರ ನಡೆದ ಜಗಳವೊಂದು 25 ವರ್ಷದ ಯುವಕ ರೋಹಿತ್ ಶರ್ಮಾ  ಕೊಲೆಯಲ್ಲಿ ಪರ್ಯವಸಾನವಾದ ಘಟನೆಯ ಹಿಂದೆ ಕೋಮು ಉದ್ದೇಶವಿತ್ತು ಎಂದು ಹತ್ಯೆಗೀಡಾದವನ ಕುಟುಂಬ ಆರೋಪಿಸಿದೆ. ಆದರೆ ಈಗಾಗಲೇ ರೋಹಿತ್‌ ಶರ್ಮಾ ಯಾನೆ ರಿಂಕು ಶರ್ಮಾ ಕೊಲೆ ಸಂಬಂಧ ಐದು ಮಂದಿಯನ್ನು ಬಂಧಿಸಿರುವ  ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರಲ್ಲದೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಂಧಿತರನ್ನು ನಸ್ರುದ್ದೀನ್‌, ಇಸ್ಲಾಂ, ಮೆಹತಾಬ್‌, ಜಾಹಿದ್‌ ಹಾಗೂ ತಾಜುದ್ದೀನ್‌ ಎಂದು ಗುರುತಿಸಲಾಗಿದೆ. ಬಂಧಿತರು ಅಲ್ಲೇ ಸಮೀಪದ ನಿವಾಸಿಗಳು ಎಂದು ತಿಳಿದು ಬಂದಿದೆ. "ನನ್ನ ಪುತ್ರ ಬಜರಂಗದಳದಲ್ಲಿ ಸಕ್ರಿಯನಾಗಿದ್ದ ಎಂಬ ಕಾರಣಕ್ಕೆ ಈ ಕೊಲೆಗೈಯಲಾಗಿದೆ ಎಂದು ರಿಂಕು ಶರ್ಮಾ ತಂದೆ ಆರೋಪಿಸಿದ್ದಾರೆ. ಆದರೆ ಈ ಕುರಿತು ದಿಲ್ಲಿ ಪೊಲೀಸರು, ಹುಟ್ಟುಹಬ್ಬ ಪಾರ್ಟಿ ನಂತರ ರೆಸ್ಟಾರೆಂಟ್ ಒಂದನ್ನು ಮುಚ್ಚುವ ಕುರಿತಂತೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತು ಎಂದು ಹೇಳಿಕೆ ನೀಡಿದ್ದಾರೆ.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣದಾದ್ಯಂತ ಬಲಪಂಥೀಯರು, ರಾಮಮಂದಿರಕ್ಕೆ ದೇಣಿಗೆ ಕೇಳಲು ಹೋದ ಸಂದರ್ಭ ಆತನನ್ನು ಹತ್ಯೆಗೈಯಲಾಗಿದೆ ಎಂಬ ವದಂತಿ ಹರಡಿದ್ದರು. ಜೊತೆಗೆ ಮೃತಪಟ್ಟ ರಿಂಕು ಶರ್ಮಾ ತನ್ನ ಕೈಯಲ್ಲಿ ಆಯುಧವೊಂದನ್ನು ಹಿಡಿದು ಬೆದರಿಸುತ್ತಿರುವ ವೀಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ಸುದ್ದಿಯಾಗುತ್ತಿದೆ. ಈ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News