ಕೋಟೇಶ್ವರ: ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳ ರಕ್ಷಣೆ
ಕುಂದಾಪುರ, ಫೆ.12: ಕೋಟೇಶ್ವರದ ಕೋಡಿ ಬೀಚ್ ರಸ್ತೆಯಲ್ಲಿರುವ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಕ್ಕಳನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಇಂದು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಸಾರ್ವಜನಿಕ ದೂರಿನಂತೆ ಬಿಜಾಪುರ ಮೂಲದ ಕುಟುಂಬವೊಂದು ನಡೆಸುತ್ತಿದ್ದ ತರಕಾರಿ ಅಂಗಡಿಗೆ ದಾಳಿ ನಡೆಸಿದ ತಂಡ, ಅಲ್ಲಿ ಕೆಲಸ ಮಾಡುತ್ತಿದ್ದ ಶಾಲೆಯಿಂದ ಹೊರಗುಳಿದ 14 ವರ್ಷದ ಬಾಲಕಿ ಹಾಗು 3 ವರ್ಷದ ಮಗುವನ್ನು ರಕ್ಷಿಸಿ, ಪುನರ್ವಸತಿಗಾಗಿ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.
ಬಾಲಕಿಯನ್ನು ವಿಚಾರಿಸಿದಾಗ, ತಂದೆ ನಮ್ಮನ್ನು ಬಿಟ್ಟು ಹೋಗಿದ್ದು, ತಾಯಿ ಊರಿಗೆ ಹೋಗಿರುವುದಾಗಿ ತಿಳಿಸಿದ್ದಾಳೆ. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 7ನೇ ತರಗತಿ ಕಲಿಯುತ್ತಿರುವ ಬಾಲಕಿ, ಇತ್ತೀಚೆಗೆ ಶಾಲೆಗೆ ಹೋಗದೆ ಶಾಲೆಯಿಂದ ಹೊರಗುಳಿದಿದೆ. ಇನ್ನೊಂದು 3 ವರ್ಷದ ಹೆಣ್ಣು ಮಗು ತರಕಾರಿ ಬುಟ್ಟಿಯಲ್ಲಿ ಮಲಗಿರುವುದು ಕಂಡುಬಂದಿದೆ. ಈ ಮಕ್ಕಳು ತಂದೆ ತಾಯಿಯ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಿರುವುದಲ್ಲದೆ, ಅವರಿಂದ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಅಧಿಕಾರಿಗಳು ದೂರಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ ಕುಂದಾಪುರ, ರಕ್ಷಾಣಾಧಿಕಾರಿಗಳಾದ ಮಹೇಶ್ ದೇವಾಡಿಗ ಮತ್ತು ಕಪಿಲಾ, ಆಪ್ತಸಮಾಲೋಚಕಿ ಅಂಬಿಕಾ, ಸಮಾಜ ಕಾರ್ಯಕರ್ತೆ ಸುರಕ್ಷಾ, ಔಟ್ ರೀಚ್ ವರ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುನಂದಾ ಹಾಗೂ ಕುಂದಾಪುರ ಠಾಣೆ ಪೊಲೀಸ್ ಸಿಬ್ಬಂದಿ ಬೇಬಿ ಭಾಗವಹಿಸಿದ್ದರು.