ಉತ್ತರಪ್ರದೇಶ: ಪೊಲೀಸ್‌ ಕಸ್ಟಡಿಯಲ್ಲಿ ಯುವಕನ ಸಾವು

Update: 2021-02-12 16:26 GMT
ಸಾಂದರ್ಭಿಕ ಚಿತ್ರ

ಜೌನಪುರ,ಫೆ.12: ಇಲ್ಲಿಯ ಬುಕ್ಸಾ ಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕನೋರ್ವನ ಸಾವನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆಗಿಳಿದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕಲ್ಲುತೂರಾಟ ನಡೆಸಿದ್ದರಿಂದ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ

ಬುಕ್ಸಾ ಠಾಣಾಧಿಕಾರಿ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಿರುವ ಎಸ್‌ಪಿ ರಾಜಕಿರಣ ನಯ್ಯರ್ ಅವರು,ಕಿಶನ ಯಾದವ್ ಅಲಿಯಾಸ್ ಪುಜಾರಿ (25) ಸಾವಿನ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಿದ್ದಾರೆ.

ಲೂಟಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಭ್ಯ ಸಾಕ್ಷಾಧಾರಗಳ ಆಧಾರದಲ್ಲಿ ವಿಚಾರಣೆಗಾಗಿ ಯಾದವ ಸೇರಿದಂತೆ ನಾಲ್ಕೈದು ಯುವಕರನ್ನು ಬುಕ್ಸಾ ಪೊಲೀಸರು ಗುರುವಾರ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ರಾತ್ರಿ ಯಾದವ ಅಸ್ವಸ್ಥಗೊಂಡಿದ್ದು,ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ನಯ್ಯರ್ ಸುದ್ದಿಗಾರರಿಗೆ ತಿಳಿಸಿದರು.

ಯಾದವ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಆತನ ಕುಟುಂಬ ಸದಸ್ಯರು ಲಕ್ನೋ-ವಾರಣಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿ ಪ್ರತಿಭಟನೆಯನ್ನು ನಡೆಸಿದರು. ಅವರು ಇಟ್ಟಿಗೆ,ಕಲ್ಲು ತೂರಾಟ ನಡೆಸಿದ್ದರಿಂದ ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾದವ್ ಪೊಲೀಸರ ಥಳಿತದಿಂದ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News