×
Ad

ಮುಚ್ಚುವ ಸ್ಥಿತಿಯಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಅನಿವಾರ್ಯ: ಡಾ‌.ಪ್ರಭಾಕರ ಜೋಶಿ

Update: 2021-02-12 22:14 IST

ಮಂಗಳೂರು,ಫೆ12: ದುಸ್ಥಿತಿಯಲ್ಲಿರುವ, ಮುಚ್ಚಿ ಹೋಗುವ ಸ್ಥಿತಿಯಲ್ಲಿರುವ  ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ನಡೆಸುವುದು ಅನಿವಾರ್ಯವಾಗಿದೆ  ಡಾ.ಪ್ರಭಾಕರ ಜೋಶಿ ತಿಳಿಸಿದ್ದಾರೆ.

ನಗರದ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ  ವಿಶ್ವೇಶತೀರ್ಥ ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ  ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 24ನೆ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕನ್ನಡ ಶಾಲೆಗಳನ್ನು ಉಳಿಸಲು ಖಾಸಗಿ ಪ್ರಾಥಮಿಕ ಶಾಲೆಗಳ ಸಮಗ್ರ ಸ್ಥಿತಿಗತಿಯ ಅಧ್ಯಯನ, ತಾಂತ್ರಿಕ ಅಡ್ಡಿಗಳನ್ನು ನಿವಾರಿಸಬೇಕು. ಸರಕಾರ ಮತ್ತು ದಾನಿಗಳ ನೆರವಿನಿಂದ ಪುನರುಜ್ಜೀವನದ ನಿಧಿಯನ್ನು (ಕೋಶ) ಸ್ಥಾಪಿಸಬೇಕು. ಶಾಲಾ ಸ್ಥಿತಿಗತಿ ಸುಧಾರಣೆಗೆ ದೊಡ್ಡ ನಿಧಿಯ ಸಹಾಯ ಅಗತ್ಯ ಎಂದು ಪ್ರಭಾಕರ ಜೋಶಿ ತಿಳಿಸಿದ್ದಾರೆ. ನಾವು ಚೌಕಟ್ಟನ್ನು ಬಿಟ್ಟು ಯೋಚಿಸಬೇಕು. ಸಮ್ಮೇಳನಗಳನ್ನು ನಡೆಸದೆ ಕನ್ನಡ ಭಾಷೆಯ ಬೆಳವಣಿಗೆ, ಕನ್ನಡಿಗರ ಸಂಘಟನೆಯ ಬಗ್ಗೆ ಚಿಂತಿಸಬೇಕು ಎಂದು ಜೋಶಿ ತಿಳಿಸಿದ್ದಾರೆ.

ಸಮ್ಮೇಳನದ ಸಭಾಂಗಣದ ಮುಂದೆ ರಾಷ್ಟ್ರಧ್ವಜಾರೋಹಣವನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ದಿವಾಕರ ಪಾಂಡೇಶ್ವರ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಲೂರ, ಸಮ್ಮೇಳನದ ಧ್ವಜಾರೋಹಣವನ್ನು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್ ನೆರವೇರಿಸಿದ್ದಾರೆ.

ಹರೇಕಳ ಹಾಜಬ್ಬರಿಂದ ಸಮ್ಮೇಳನ ಉದ್ಘಾಟನೆ:
ನಾನೊಬ್ಬ ಸಾಮಾನ್ಯ ಮನುಷ್ಯ ಆದರೆ ನನ್ನಂತಹ ಬಡವನಿಗೆ ಪದ್ಮಶ್ರೀಯಂತಹ ದೇಶದ ಉನ್ನತ ಪ್ರಶಸ್ತಿ ನೀಡಿ ಗೌರವಿಸಿದ ಈ ದೇಶದ ಪ್ರದಾನಿಯಿಂದ ಹಿಡಿದು ಎಲ್ಲರಿಗೂ ಕ್ರತಜ್ಞತೆ ಸಲ್ಲಿಸುವುದಾಗಿ ಸಮಾರಂಭವನ್ನು ಉದ್ಘಾಟಿಸಿದ ಹರೇಕಳ ಹಾಜಬ್ಬ ತಿಳಿಸಿದ್ದಾರೆ.

ಆರಂಭದಲ್ಲಿ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಸಲಾಯಿತು. ಮೂಡಬಿದ್ರಿ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವನ ನೀಡಿದರು.

ಹರೇಕಳ ಹಾಜಬ್ಬರಂತಹ ವ್ಯಕ್ತಿಗಳಿಂದ ದೇಶಕ್ಕೆ ಗೌರವ : ಡಾ.ಬಿ.ಎ.ವಿವೇಕ ರೈ
ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಮಾತನಾಡುತ್ತಾ, ಹಾಜಬ್ಬನಂತಹ ವ್ಯಕ್ತಿಗಳು ಪದ್ಮಶ್ರೀ ಪಡೆಯುತ್ತಿರುವುದು ಈ ದೇಶದ ಗೌರವದ ಸಂಕೇತವಾಗಿದೆ. ಆತ್ಮ ನಿರ್ಭರ ಪರಿಕಲ್ಪನೆಯನ್ನು ದೇಶಕ್ಕೆ ಈ ಹಿಂದೆ ಕೊಟ್ಟವರು ಮಹಾತ್ಮ ಗಾಂಧಿ. ಈ ಜಿಲ್ಲೆಗೆ ಮೂರು ಬಾರಿ ಗಾಂಧಿ ಬಂದು ಸ್ವಾವಲಂಬನೆಯ ಬಗ್ಗೆ ಜಾಗ್ರತಿ ಮೂಡಿಸಿದ್ದಾರೆ. ಅಂತಹ ಗಾಂಧಿಯವರ ಮೇಲೆ ಪ್ರಭಾವ ಬೀರಿದ ಕುದ್ಮುಲ್ ರಂಗರಾವ್ ರವರು ಪ್ರಭಾವ ಈ ಜಿಲ್ಲೆಯಲ್ಲಿದೆ. ಪತ್ರಿಕೆಗಳು,ಇಲ್ಲಿನ ಯಕ್ಷಗಾನದಂತಹ ಕಲಾ ಮಾಧ್ಯಮಗಳು ಕನ್ನಡ ಸಾಹಿತ್ಯ ಬೆಳವಣಿಗೆಗೆ ಕಾರಣವಾಗಿದೆ. ಈ ಜಿಲ್ಲೆಯ ಜನರು ಬೇರೆ ಕ್ಷೇತ್ರದಲ್ಲಿ ಬಹುತ್ವದ ಕಲ್ಪನೆಯೊಂದಿಗೆ ಬಹಳ ಹಿಂದಿನಿಂದಲೂ ಸಕ್ರಿಯರಾಗಿದ್ದರು ವಿವೇಕ ರೈ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ಸಂಗೀತ ವಿದ್ವಾಂಸರಾದ ಎಂ. ನಾರಾಯಣ ಸುರತ್ಕಲ್ ಉದ್ಘಾಟಿಸಿದ್ದಾರೆ. ಪುಸ್ತಕಗಳ ಲೋಕಾರ್ಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ಧರ್ಮದರ್ಶಿ ಹರಿಕೃಷ್ಣ ಪುನರೂರು ನಡೆಸಿದ್ದಾರೆ. ಮಂಗಳೂರು ಬಿಷಪ್ ಅತೀ. ವಂ.ಡಾ.ಪೀಟರ್ ಪಾವ್ಲ್ ಸಲ್ದಾನ, ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಮಹಾಬಲೇಶ್ವರ, ಎಂಸಿಎಫ್ ನ ಆಡಳಿತ ನಿರ್ದೇಶಕ ಪ್ರಭಾಕರ, ಯೂನಿಯನ್ ಬ್ಯಾಂಕ್  ಮಂಗಳೂರು ಶಾಖೆಯ ಮಹಾಪ್ರಬಂಧಕ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದಾರೆ.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಸಮಾರಂಭದಲ್ಲಿ ಶಾರದ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ.ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ದ.ಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ದಯಾನಂದ ಕಟೀಲ್, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಜಿ.ಕೆ.ಭಟ್ ಸೇರಾಜೆ ಪರಿಚಯಿಸಿದರು.

ಕನ್ನಡ ಭುವನೇಶ್ವರಿಯ ಮೆರವಣಿಗೆಯನ್ನು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದ್ದಾರೆ. ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತಸರರಾದ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆಗೊಳಿಸಿದರು. ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ರಾವ್, ತುಳುನಾಡು ಎಜುಕೇಶನ್ ಟ್ರಸ್ಟ್ ವಿಶ್ವಸ್ಥರಾದ ಸೀತಾರಾಮ ಆಚಾರ್, ಮಹಾನಗರ ಪಾಲಿಕೆ ಮುಖ್ಯ ಸಚೇತಕರು ಪ್ರೇಮಾನಂದ ಮಹಾನಗರ ಪಾಲಿಕೆ ವಿಪಕ್ಷ ನಾಯಕರು ಅಬ್ದುಲ್ ರವೂಫ್, ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯರಾದ ಜಯಶ್ರೀ ಕುಡ್ಡ, ಎಂ.ಸಿ.ಎಫ್ ಆಡಳಿತ ನಿರ್ದೇಶಕರಾದ ಕೆ. ಪ್ರಭಾಕರ ರಾವ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News