ಪರ್ಕಳ: ತ್ಯಾಜ್ಯ ನೀಡದ 56 ಮನೆಗಳಿಗೆ ನಗರಸಭೆಯಿಂದ ನೋಟೀಸ್

Update: 2021-02-13 17:44 GMT

ಉಡುಪಿ, ಫೆ.13: ಮನೆಯ ತ್ಯಾಜ್ಯಗಳನ್ನು ಸ್ವಸಹಾಯ ಸಂಘಕ್ಕೆ ನೀಡದ ಪರ್ಕಳ ಸುತ್ತಮುತ್ತಲಿನ ಸುಮಾರು 56 ಮನೆಗಳಿಗೆ ಉಡುಪಿ ನಗರಸಭೆ ನೋಟೀಸು ಜಾರಿ ಮಾಡಿದೆ.

ತ್ಯಾಜ್ಯ ಸಂಗ್ರಹಿಸುವ ಪೆರಂಪಳ್ಳಿಯ ಸ್ವಸಹಾಯ ಗುಂಪು ನೀಡಿದ ದೂರಿನಂತೆ ನೋಟೀಸ್ ಜಾರಿ ಮಾಡಿರುವ ಪೌರಾಯುಕ್ತ ಉದಯ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕರ ವರದಿ ಅನುಸಾರ, ಮನೆಯ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ವಿಧಾನವನ್ನು ದಾಖಲೆ ಸಹಿತ ಕಚೇರಿಗೆ ಸಲ್ಲಿಸಬೇಕು ಮತ್ತು ತ್ಯಾಜ್ಯ ವಿಂಗಡಣೆ ಮಾಡಿ ಹಸಿ ತ್ಯಾಜ್ಯವನ್ನು ನೀವೇ ವಿಲೇವಾರಿ ಮಾಡುತ್ತಿದ್ದಲ್ಲಿ ಒಣ ತ್ಯಾಜ್ಯವನ್ನು ಕಡ್ಡಾಯವಾಗಿ ಎಸ್‌ಎಚ್‌ಜಿಗೆ ನೀಡಬೇಕು ಮತ್ತು ಎಸ್‌ಎಚ್‌ಜಿಗೆ ತ್ಯಾಜ್ಯವನ್ನು ನೀಡುತ್ತಿರುವ ಬಗ್ಗೆ ದಾಖಲೆಗಳನ್ನು ಹಾಜರುಪಡಿ ಸಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಲಾಗಿದೆ.

ತಪ್ಪಿದಲ್ಲಿ ಈ ಬಗ್ಗೆ ದಂಡ ವಿಧಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ನೋಟೀಸ್‌ನಲ್ಲಿ 56 ಮನೆಯವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಸ್ಥಳೀಯರ ಆಕ್ರೋಶ: ನಗರಸಭೆ ಜಾರಿ ಮಾಡಿರುನ ನೋಟೀಸ್ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಲಭ್ಯಗಳಾದ ರಸ್ತೆ, ದಾರಿದೀಪ, ಕಿರು ಸೇತುವೆ ಮತ್ತು ಕುಡಿಯುವ ನೀರು ಸಂಪರ್ಕ ಕಲ್ಪಿಸದೆ ಪರ್ಕಳದ ಕೆಲವೊಂದು ಮನೆಯವರಿಗೆ ಕಾಲುದಾರಿಯಲ್ಲಿಯೇ ನಡೆದು ಕೊಂಡು ಹೋಗುವ ಪರಿಸ್ಥಿತಿ ಈಗಲೂ ಇದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ನಂತರ ಇತರೆ ತ್ಯಾಜ್ಯಗಳನ್ನು ತೆಗೆದುಕೊಳ್ಳುವ ಕೆಲಸ ಆಗಬೇಕು ಎಂದು ನೋಟಿಸು ಪಡೆದುಕೊಂಡ ಉಮೇಶ್ ನಾಯಕ್ ತಿಳಿಸಿದ್ದಾರೆ.

ಘನ ತ್ಯಾಜ್ಯದ ಸಣ್ಣ ವಾಹನಗಳು ಚಲಿಸದ ಪರಿಸ್ಥಿತಿಯು ಪರ್ಕಳದಲ್ಲಿರುವ ನಗರಸಭೆಯ ಅಧ್ಯಕ್ಷರ ವಾರ್ಡಿನಲ್ಲಿದೆ. ಇವರು ಈ ವಾರ್ಡಿನಲ್ಲಿ ಸುಮಾರು ಸತತ ಮೂರು ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ ಲಾದರೂ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಅಗತ್ಯವಾದ ಮೂಲ ಸೌಲತ್ತುಗಳನ್ನು ಒದಗಿಸಿ, ನಂತರ ಘನತ್ಯಾಜ್ಯ ತೆಗೆದುಕೊಳ್ಳುವ ಕೆಲಸ ಮಾಡಲಿ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News