ವಿಪತ್ತು ಪರಿಹಾರವಾಗಿ 5 ರಾಜ್ಯಗಳಿಗೆ 3,000 ಕೋ. ರೂ. ನೀಡಲಿರುವ ಕೇಂದ್ರ

Update: 2021-02-13 18:39 GMT

ಹೊಸದಿಲ್ಲಿ, ಫೆ. 13: 2020ರಲ್ಲಿ ಪ್ರಾಕೃತಿಕ ವಿಪತ್ತು ಹಾಗೂ ಕೀಟ ದಾಳಿ ಎದುರಿಸಿದ 5 ರಾಜ್ಯಗಳಿಗೆ ಸುಮಾರು 3,113 ಕೋಟಿ ರೂಪಾಯಿ ಪರಿಹಾರ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶನಿವಾರ ಅನುಮೋದನೆ ನೀಡಿದೆ.

 ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿ (ಎನ್‌ಡಿಆರ್ ಎಂಎಫ್)ಯಿಂದ ಕೇಂದ್ರದ ಹೆಚ್ಚುವರಿ ನೆರವು ಪಡೆದುಕೊಳ್ಳಲಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೆಂದರೆ ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಹಾಗೂ ಮಧ್ಯಪ್ರದೇಶ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

2020ರಲ್ಲಿ ನೆರೆ, ಚಂಡಮಾರುತಗಳು (ನಿವಾರ್ ಹಾಗೂ ಬುರೇವಿ) ಹಾಗೂ ಕೀಟ ದಾಳಿಯಿಂದ ತೊಂದರೆಗೊಳಗಾದ 5 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಹೆಚ್ಚುವರಿ ನೆರವು ನೀಡಲು ಗೃಹ ಸಚಿವರ ಅಧ್ಯಕ್ಷತೆಯ ಸಮಿತಿ ಅನುಮೋದನೆ ನೀಡಿದೆ.

ನೈಋತ್ಯ ಮನ್ಸೂನ್ ಸಂದರ್ಭ ನೆರೆ ಸಂಭವಿಸಿದ ಆಂಧ್ರಪ್ರದೇಶ 280.78 ಕೋಟಿ ರೂಪಾಯಿ, ಬಿಹಾರ 1.255.27 ಕೋಟಿ ರೂಪಾಯಿ ನೆರವು ಪಡೆಯಲಿದೆ.

ನಿವಾರ್ ಚಂಡ ಮಾರುತಕ್ಕೆ 63.14 ಕೋಟಿ ರೂಪಾಯಿ ಹಾಗೂ ಬುರೇವಿ ಚಂಡಮಾರುತಕ್ಕೆ 223.77 ಕೋಟಿ ರೂಪಾಯಿ-ಹೀಗೆ ತಮಿಳುನಾಡು ಒಟ್ಟು 286.91 ಕೋಟಿ ರೂಪಾಯಿ ನೆರವು ಪಡೆಯಲಿದೆ.

 ನಿವಾರ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ 9.91 ಕೋಟಿ ರೂಪಾಯಿ ನೆರವು ಪಡೆಯಲಿದೆ. ಖಾರಿಫ್ ಕಾಲದಲ್ಲಿ ಕೀಟ ದಾಳಿಗೆ ಒಳಗಾದ ಮಧ್ಯಪ್ರದೇಶ 1,280.18 ಕೋಟಿ ರೂಪಾಯಿ ನೆರವು ಪಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News