ಎರಡನೇ ವಾಗ್ದಂಡನೆ ವಿಚಾರಣೆಯಲ್ಲೂ ಟ್ರಂಪ್ ದೋಷಮುಕ್ತ

Update: 2021-02-14 16:46 GMT

 ವಾಶಿಂಗ್ಟನ್,ಫೆ.14: ಅಮೆರಿಕದ ಸಂಸತ್‌ಭವನ ಕಟ್ಟಡ ಕ್ಯಾಪಿಟೋಲ್‌ನಲ್ಲಿ ಕಳೆದ ತಿಂಗಳು ನಡೆದ ದಾಂಧಲೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದಲ್ಲಿ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಲಾಗಿದ್ದ ವಾಗ್ದಂಡನೆ ನಿರ್ಣಯಕ್ಕೆ 57-43 ಮತಗಳಿಂದ ಸೋಲಾಗಿದೆ.

ಅಮೆರಿಕ ಸೆನೆಟ್‌ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ನರು ಸದಸ್ಯರು ವಾಗ್ದಂಡನೆ ನಿರ್ಣಯದ ವಿರುದ್ಧ ಮತಚಲಾಯಿಸುವ ಮೂಲಕ ಟ್ರಂಪ್ ಅವರ ಎರಡನೆ ಬಾರಿ ವಾಗ್ದಂಡನೆಗೊಳಗಾಗುವುದನ್ನು ತಪ್ಪಿಸಿದ್ದಾರೆ.

 ವಾಗ್ದಂಡನೆ ನಿರ್ಣಯಕ್ಕೆ ಸೋಲಾಗುವುದರೊಂದಿಗೆ 74 ವರ್ಷದ ಟ್ರಂಪ್ ಅವರಿಗೆ ರಿಪಬ್ಲಿಕನ್ ಪಕ್ಷದಲ್ಲಿ ಬಲವಾದ ಹಿಡಿತವನ್ನು ಉಳಿಸಿಕೊಂಡಿರುವುದು ದೃಢಪಟ್ಟಿದೆಯೆಂದು ಅಮೆರಿಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ವಾಗ್ದಂಡನೆ ನಿರ್ಣಯದ ಪರವಾಗಿ ಅಮೆರಿಕ ಸೆನೆಟ್‌ನಲ್ಲಿ 43 ಮಂದಿ, ವಿರುದ್ಧವಾಗಿ 57 ಮಂದಿ ಮತ ಚಲಾಯಿಸಿದ್ದರು. ನಿರ್ಣಯ ಅಂಗೀಕಾರಗೊಳ್ಳಬೇಕಿದ್ದರೆ ಸೆನೆಟ್‌ನಲ್ಲಿ ಮೂರನೆ ಎರಡರಷ್ಟು ಮತಗಳ ಅಗತ್ಯವಿದೆ. ಆದರೂ, ಏಳು ಮಂದಿ ರಿಪಬ್ಲಿಕನ್ ಪಕ್ಷದ ಸದಸ್ಯರು ಆಡಳಿತಾರೂಢ ಡೆಮಾಕ್ರಾಟಿಕ್ ಪಕ್ಷದ ಸದಸ್ಯರ ಜೊತೆ ಕೈಜೋಡಿಸಿದ್ದು, ಟ್ರಂಪ್‌ರ ವಾಗ್ದಂಡನೆಗೆ ಆಗ್ರಹಿಸಿ ಮತಚಲಾಯಿಸಿದ್ದಾರೆ.

  ಜನವರಿ 20ರಂದು ಅಧ್ಯಕ್ಷೀಯ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಫ್ಲಾರಿಡಾದ ಲ್ಲಿ ತನ್ನ ಒಡೆತನದ ‘ಮಾರ್ಲಾ ಗೊ’ ರಿಸಾರ್ಟ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಏಕಾಂತವಾಗಿ ನೆಲೆಸಿರುವ ಟ್ರಂಪ್, ನಿರ್ಣಯದ ವಿರುದ್ಧ ಸೆನೆಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ.

ಟ್ರಂಪ್ ಮತ್ತೆ ಸಕ್ರಿಯ ರಾಜಕಾರಣಕ್ಕೆ?

  ತನ್ನ ವಿರುದ್ಧ ಮಂಡಿಸಲಾದ ವಾಗ್ದಂಡನೆ ನಿರ್ಣಯಕ್ಕೆ ಸೋಲಾದ ಬೆನ್ನಲ್ಲೇ ಟ್ರಂಪ್ ಮತ್ತೆ ಸಕ್ರಿಯ ರಾಜಕಾರಣಕ್ಕಿಳಿಯುವ ಸುಳಿವನ್ನು ನೀಡಿದ್ದಾರೆ. ‘‘ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿಸುವ ನಮ್ಮ ಐತಿಹಾಸಿಕ, ದೇಶಭಕ್ತ ಹಾಗೂ ಸುಂದರವಾದ ಚಳವಳಿಯು ಈಗಷ್ಟೇ ಆರಂಭವಾಗಿದೆ’’ ಎಂದವರು ಹೇಳಿದ್ದಾರೆ.

‘‘ನಾವು ಮಾಡಬೇಕಾಗಿರುವಂತಹ ಬಹಳಷ್ಟು ಕೆಲಸ ನಮ್ಮ ಮುಂದಿದೆ. ಉಜ್ವಲ,ಪ್ರಕಾಶಯುತವಾದ ಹಾಗೂ ಅಮಿತವಾದ ಅಮೆರಿಕದ ಭವಿಷ್ಯದ ಕುರಿತಾದ ದೂರದೃಷ್ಟಿಯೊಂದಿಗೆ ಶೀಘ್ರದಲ್ಲೇ ನಾವು ಮೂಡಿಬರಲಿದ್ದೇವೆ’’ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಜನವರಿ 6ರಂದು ಅಮೆರಿಕದ ಸಂಸತ್‌ಭವನದ ಕ್ಯಾಪಿಟೊಲ್ ಹಿಲ್‌ಗೆ ಟ್ರಂಪ್ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿದ್ದರು. ಈ ದಾಳಿಗೆ ಟ್ರಂಪ್ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಜನವರಿ 13ರಂದು ಪ್ರತಿನಿಧಿ ಸಭೆಯು ವಾಗ್ದಂಡನೆ ನಿರ್ಣಯವನ್ನು ಮಂಡಿಸಿತ್ತು.

 ವಿಷಾದಕರ ಅಧ್ಯಾಯ: ಬೈಡೆನ್

 ವಾಗ್ದಂಡನೆ ನಿರ್ಣಯದಲ್ಲಿ ಟ್ರಂಪ್ ಅವರು ದೋಷಮುಕ್ತರಾಗಿದ್ದರೂ, ಅಮೆರಿಕದ ಕ್ಯಾಪಿಟೊಲ್ ಹಿಲ್ ಸಂಸತ್‌ಭವನದ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಟ್ರಂಪ್ ವಿರುದ್ಧ ಹೊರಿಸಲಾದ ಆರೋಪಗಳು ನಿರ್ವಿವಾದವಾದುವು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ‘‘ ನಮ್ಮ ಇತಿಹಾಸದಲ್ಲೇ ಇದೊಂದು ವಿಷಾದಕರ ಅಧ್ಯಾಯವಾಗಿದೆ ಹಾಗೂ ಪ್ರಜಾಪ್ರಭುತ್ವವು ದುರ್ಬಲವಾಗಿದೆಯೆಂಬುದನ್ನು ಇದು ನಮಗೆ ನೆನಪಿಸಿದೆ. ಪ್ರಜಾಪ್ರಭುತ್ವವನ್ನು ಸದಾ ನಾವು ರಕ್ಷಿಸಬೇಕಾಗಿದೆ. ನಾವು ಸದಾ ಜಾಗೃತರಾಗಿರಬೇಕಾಗಿದೆ’’ ಎಂದು ಬೈಡೆನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News