ಬಿಬಿಸಿ ನಿಷೇಧ: ಚೀನಾ ಬಳಿಕ ಈಗ ಹಾಂಕಾಂಗ್ ಸರದಿ

Update: 2021-02-14 03:51 GMT

ಹಾಂಕಾಂಗ್, ಫೆ.14: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಬಿಬಿಸಿ) ಕಾರ್ಯಕ್ರಮಗಳನ್ನು ದೇಶದಲ್ಲಿ ಇನ್ನು ಮುಂದೆ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹಾಂಕಾಂಗ್ ಸರಕಾರಿ ಪ್ರಸಾರ ಸಂಸ್ಥೆ ಘೋಷಿಸಿದೆ. ಚೀನಾದಲ್ಲಿ ಇತ್ತೀಚೆಗೆ ಬಿಬಿಸಿ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು.

ಚೀನಾ ಸರ್ಕಾರ ಬಿಬಿಸಿಯನ್ನು ನಿಷೇಧಿಸಿದ ಬೆನ್ನಲ್ಲೇ ಸರಕಾರದ ಈ ಕ್ರಮಕ್ಕೆ ವಿಶ್ಲೇಷಕರಿಂದ ವಿರೋಧ ವ್ಯಕ್ತವಾಗಿದ್ದು, ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಗ್ಗುತ್ತಿದೆ ಎಂದು ಅಭಿಪ್ರಾಯಪಟ್ಟಿದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮರುಶಿಕ್ಷಣ ಶಿಬಿರಗಳಲ್ಲಿನ ಸಂತ್ರಸ್ತರನ್ನು ಸಂದರ್ಶಿಸುವ ಮೂಲಕ ಕ್ಸಿಂಗ್‌ಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಸಿ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ನ್ಯಾಷನಲ್ ರೇಡಿಯೊ ಆ್ಯಂಡ್ ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆ ನೀಡಿತ್ತು.

ದೇಶದಲ್ಲಿ ಕೊರೋನ ವೈರಸ್ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಕೂಡಾ ಬಿಬಿಸಿ ಸುಳ್ಳು ವರದಿಗಳನ್ನು ಮಾಡಿತ್ತು ಎಂದು ಚೀನಾ ಕಮ್ಯುನಿಸ್ಟ್ ಪಾರ್ಟಿ ಸರಕಾರದ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಹೇಳಿದೆ. ರೇಡಿಯೊ ಟೆಲಿವಿಷನ್ ಹಾಂಕಾಂಗ್ (ಆರ್‌ಟಿಎಚ್‌ಕೆ) ಈ ಮುನ್ನ ಬಿಬಿಸಿ ವರ್ಲ್ಡ್ ಸರ್ವೀಸ್ ಕಾರ್ಯಕ್ರಮಗಳನ್ನು ರಾತ್ರಿ 11ರಿಂದ ಬೆಳಗ್ಗೆ 7ವರೆಗೆ ಪ್ರಸಾರ ಮಾಡುತ್ತಿತ್ತು. ಅಂತೆಯೇ ಬಿಬಿಸಿಯ ಕಾಂಟೊನೀಸ್ ಭಾಷಾ ರೇಡಿಯೊ ಕಾರ್ಯಕ್ರಮವನ್ನು ಪ್ರತಿ ರವಿವಾರ ಬೆಳಿಗ್ಗೆ 7ಕ್ಕೆ ಪ್ರಸಾರ ಮಾಡುತ್ತಿತ್ತು.

"ಕೇಂದ್ರ ಸರಕಾರ ತೆಗೆದುಕೊಂಡ ನಿಲುವನ್ನು ಹಾಂಕಾಂಗ್ ಸರಕಾರ ಅನುಸರಿಸುತ್ತದೆ. ಆರ್‌ಟಿಎಚ್‌ಕೆ ಇದರಿಂದ ತಪ್ಪಿಸಿಕೊಳ್ಳುವುದಿಲ್ಲ" ಎಂದು ಚೀನಾ ವಇವಿಯ ಸ್ಕೂಲ್ ಆಫ್ ಜರ್ನಲಿಸಂ ಮತ್ತು ಕಮ್ಯುನಿಕೇಶನ್ಸ್‌ನ ಪ್ರಾಧ್ಯಾಪಕ ಗ್ರೇಸ್ ಲಿಯಾಂಗ್ ಲೈ ಕ್ಯೂನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News