ದಾಸರ ಸಾಹಿತ್ಯದ ಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಅದಮಾರು ಶ್ರೀ
ಉಡುಪಿ, ಫೆ.14: ಪ್ರಪಂಚದ ಪ್ರತಿ ವಸ್ತುವಿನಿಂದಲೂ ಕಲಿಯಬೇಕಾದ್ದು ತುಂಬಾ ಇದೆ. ಅದರಂತೆ ದಾಸರು ಕೊಟ್ಟ ಸಾಹಿತ್ಯದ ಭಾವವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀಕೃಷ್ಣ ಮಠ ಅದಮಾರು ಮಠದ ಆಶ್ರಯದಲ್ಲಿ ಬೆಂಗಳೂರು ನಿನ್ನಾ ಒಲುಮೆಯಿಂದ ಪ್ರತಿಷ್ಠಾನಂ ವತಿಯಿಂದ ರವಿವಾರ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ 16ನೆ ವರ್ಷದ ಶ್ರೀಮಧ್ವಪುರಂದರೋತ್ಸವ ಜ್ಞಾನಯಜ್ಞದ ಸಮರ್ಪಣಾ ಮಹೋತ್ಸದಲ್ಲಿ ಅವರು ಮಾತನಾಡುತಿದ್ದರು.
ಪರ್ಯಾಯ ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಯಾರನ್ನು ಭಜಿಸಿದಲ್ಲಿ ನಮಗೆ ತೃಪ್ತಿ ಯಾಗುತ್ತೋ ಅವನನ್ನೇ ಬೇಡಿಕೊಳ್ಳಬೇಕು. ಇದರಿಂದ ದೇವರಲ್ಲಿ ತೃಪ್ತಿಯನ್ನು ಕಾಣಬಹುದು ಎಂದು ತಿಳಿಸಿದರು.
ಪಲಿಮಾರು ಹಿರಿಯ ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀ ರ್ವಚನ ನೀಡಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಮೈಸೂರು ರಾಮಚಂದ್ರ ಆಚಾರ್ಯರು ಕಾರ್ಯಕರ್ತರೊಂದಿಗೆ ಸ್ವಾಮೀಜಿಯವರನ್ನು ಗೌರವಿಸಿದರು.