ಜಮ್ಮು ಬಸ್ ನಿಲ್ದಾಣದ ಬಳಿ ಏಳು ಕೆ.ಜಿ. ಸ್ಫೋಟಕ ಪತ್ತೆ

Update: 2021-02-14 13:45 GMT

ಜಮ್ಮು,ಫೆ.14: ಜಮ್ಮುವಿನ ಕುಂಜ್ವಾನಿ ಮತ್ತು ಸಾಂಬಾ ಜಿಲ್ಲೆಯ ಬಡಿ ಬ್ರಾಹ್ಮಣ ಪ್ರದೇಶದಲ್ಲಿ ಇಬ್ಬರು ಪ್ರಮುಖ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ ಬೆನ್ನಿಗೇ ಸದಾ ಜನರಿಂದ ತುಂಬಿರುವ ಜಮ್ಮು ಬಸ್ ನಿಲ್ದಾಣ ಪ್ರದೇಶದಲ್ಲಿ ರವಿವಾರ ಏಳು ಕೆ.ಜಿ.ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವೊಂದು ಪತ್ತೆಯಾಗಿದೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ಐಇಡಿಯನ್ನು ಪತ್ತೆ ಹಚ್ಚುವ ಮೂಲಕ ಭಾರೀ ದುರಂತವೊಂದನ್ನು ತಪ್ಪಿಸಲಾಗಿದೆ ಮತ್ತು 2019ರ ಪುಲ್ವಾಮಾ ದಾಳಿಯ ದ್ವಿತೀಯ ವರ್ಷಾಚರಣೆ ಸಂದರ್ಭ ಸ್ಫೋಟವನ್ನು ನಡೆಸುವ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಓರ್ವ ಪೊಲೀಸ್ ಮತ್ತು ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಬೇಕಾಗಿದ್ದ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್)ನ ಪ್ರಮುಖ ಭಯೋತ್ಪಾದಕ ಝಹೂರ್ ಅಹ್ಮದ್ ರಾಥರ್‌ನನ್ನು ಶನಿವಾರ ಸಾಂಬಾದ ಬಡಿ ಬ್ರಾಹ್ಮಣ ಪ್ರದೇಶದಿಂದ ಬಂಧಿಸಲಾಗಿದ್ದರೆ,ಇದಕ್ಕೂ ಮುನ್ನ ಫೆ.6ರಂದು ಲಷ್ಕರ್-ಎ-ಮುಸ್ತಫಾ ಸಂಘಟನೆಯ ಸ್ವಘೋಷಿತ ಕಮಾಂಡರ್ ಹಿದಾಯತುಲ್ಲಾ ಮಲಿಕ್ ಅಲಿಯಾಸ್ ಹಸ್ನೈನ್ ಎಂಬಾತ ಜಮ್ಮುವಿನ ಕುಂಜ್ವಾನಿಯಲ್ಲಿ ಭದ್ರತಾ ಪಡೆಗಳ ಬಲೆಗೆ ಬಿದ್ದಿದ್ದ.

2019,ಫೆ.14ರಂದು ಪಾಕಿಸ್ತಾನ ಪ್ರಾಯೋಜಿತ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ 70 ವಾಹನಗಳ ಸಾಲಿನ ಮೇಲೆ ಭೀಕರ ದಾಳಿಯನ್ನು ನಡೆಸಿದ್ದು,40 ಯೋಧರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News