ಸರಕಾರದ ಪರ ತೀರ್ಪು ನೀಡಿದಕ್ಕೆ ರಾಜ್ಯಸಭಾ ಸದಸ್ಯತ್ವ ಸಿಕ್ಕಿತೇ ಎಂಬ ಪ್ರಶ್ನೆಗೆ ರಂಜನ್ ಗೊಗೊಯಿ ಉತ್ತರವೇನು ಗೊತ್ತೇ?

Update: 2021-02-14 14:04 GMT

ಹೊಸದಿಲ್ಲಿ,ಫೆ.14: ಇಂಡಿಯಾ ಟುಡೇ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಳೆದ ವರ್ಷ ತನ್ನ ನಿವೃತ್ತಿಯ ಬಳಿಕ ರಾಜ್ಯಸಭೆಗೆ ನಾಮಕರಣ ಹಾಗೂ ಅಯೋಧ್ಯೆ ವಿವಾದ ಮತ್ತು ರಫೇಲ್ ಒಪ್ಪಂದ ಕುರಿತು ತೀರ್ಪುಗಳು ಸೇರಿದಂತೆ ತನ್ನ ಸುತ್ತ ಸೃಷ್ಟಿಯಾಗಿರುವ ವಿವಾದಗಳ ಕುರಿತು ಮಾತನಾಡಿರುವ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು,ರಾಜ್ಯಸಭಾ ಸದಸ್ಯತ್ವ ಸರಕಾರದ ಪರ ತೀರ್ಪುಗಳಿಗೆ ಕೊಡುಗೆಯಾಗಿದ್ದರೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರದ ಪರವಾಗಿ ನೀಡಿದ್ದ ತೀರ್ಪುಗಳಿಗೆ ಪ್ರತಿಯಾಗಿ ನಿಮ್ಮನ್ನು ರಾಜ್ಯಸಭಾ ಸದಸ್ಯತ್ವಕ್ಕೆ ನಾಮಕರಣ ಮಾಡಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ನಾನೇನನ್ನಾದರೂ ಬಯಸಿದ್ದರೆ ರಾಜ್ಯಸಭಾ ಸ್ಥಾನವನ್ನು ಕೇಳುತ್ತಿರಲಿಲ್ಲ. ಅದಕ್ಕಿಂತ ದೊಡ್ಡದನ್ನು ಕೇಳುತ್ತಿದ್ದೆ ಎಂದರು.

ಏನಾದರೂ ರಚನಾತ್ಮಕ ಕೆಲಸ ಮಾಡಲು ತಾನು ರಾಜ್ಯಸಭೆಯನ್ನು ಪ್ರವೇಶಿಸಿದ್ದೇನೆ ಮತ್ತು ರಾಜ್ಯಸಭಾ ಸದಸ್ಯನಾಗಿ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಸಂಭಾವನೆಯನ್ನು ಸ್ವೀಕರಿಸುವುದಿಲ್ಲ ಎಂದು ಲಿಖಿತವಾಗಿ ತಿಳಿಸುವ ಮೂಲಕ ಇದನ್ನು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದ ಗೊಗೊಯಿ,ತನ್ನ ಆತ್ಮಸಾಕ್ಷಿಯು ಶುದ್ಧವಾಗಿರುವುದರಿಂದ ರಾಜ್ಯಸಭಾ ಸದಸ್ಯತ್ಯವು ತನಗೆ ಕೊಡುಗೆಯಾಗಿದೆ ಎಂಬ ಟೀಕೆಗಳು ತನ್ನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದರು.

ಭಾರತದ ನ್ಯಾಯದಾನ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಅವರು,ನ್ಯಾಯಾಂಗವು ಜರ್ಜರಿತ ಸ್ಥಿತಿಯಲ್ಲಿದ್ದು,ತಾನೆಂದೂ ಸಮಸ್ಯೆಗೆ ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನ್ಯಾಯಾಲಯಕ್ಕೆ ಯಾರು ಹೋಗುತ್ತಾರೆ? ಅಲ್ಲಿಗೆ ಹೋದವರು ಪಶ್ಚಾತ್ತಾಪ ಪಡುತ್ತಾರೆ ಎಂದರು.

  ಇತ್ತೀಚಿಗೆ ಸಾರ್ವಜನಿಕ ವೇದಿಕೆಯಲ್ಲಿ ನ್ಯಾ.ಎಂ.ಆರ್.ಶಾ ಅವರಿಂದ ಪ್ರಧಾನಿ ನರೇಂದ್ರ ಮೋದಿಯವರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಅವರು,ಮಾನ್ಯ ನ್ಯಾಯಾಧೀಶರು ಅಂತಹ ಹೇಳಿಕೆಯನ್ನು ನೀಡಬಾರದಿತ್ತು. ಪ್ರಧಾನಿಯವರನ್ನು ಅವರು ಅಷ್ಟೊಂದು ಮೆಚ್ಚುತ್ತಾರಾದರೆ ಅದು ಅವರೊಳಗೇ ಇರಬೇಕಿತ್ತು. ಈ ಬಗ್ಗೆ ಇದಕ್ಕಿಂತ ಹೆಚ್ಚೇನೂ ತಾನು ಹೇಳುವುದಿಲ್ಲ ಎಂದು ಹೇಳಿದರು. ಆದರೆ ನ್ಯಾಯಾಧೀಶರೋರ್ವರಿಂದ ಇಂತಹ ನಡವಳಿಕೆ ‘ಉಪಕಾರಕ್ಕೆ ಪ್ರತಿಫಲ ’ಎನ್ನುವುದನ್ನು ಸೂಚಿಸುವುದಿಲ್ಲ ಎಂದೂ ಅವರು ಹೇಳಿದರು.

ನ್ಯಾ.ಶಾ ಅವರು ಮೋದಿಯವರನ್ನು ‘ನಮ್ಮ ಅತ್ಯಂತ ಜನಪ್ರಿಯ,ಪ್ರೀತಿಯ,ಸ್ಪಂದನಶೀಲ ಮತ್ತು ದೂರದೃಷ್ಟಿಯ ನಾಯಕ ’ಎಂದು ಬಣ್ಣಿಸಿದ್ದರು.

ಲೋಕಸಭೆಯಲ್ಲಿ ಸದಸ್ಯೆ ಮಹುವಾ ಮೊಯಿತ್ರಾವರ ಹೇಳಿಕೆಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಗೊಗೊಯಿ,ನೀವು ನ್ಯಾಯಾಲಯಕ್ಕೆ ಹೋದರೆ ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಗೊಳಿಸುತ್ತೀರಿ ಅಷ್ಟೇ. ನಿಮಗೆ ನ್ಯಾಯ ಸಿಗುವುದಿಲ್ಲ ಎಂದು ಉತ್ತರಿಸಿದರು. ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ದೂರುಗಳನ್ನು ತಾನೇ ಇತ್ಯರ್ಥಗೊಳಿಸುವ ಮೂಲಕ ಗೊಗೊಯಿ ನ್ಯಾಯಾಂಗಕ್ಕೆ ಅಪಖ್ಯಾತಿಯನ್ನುಂಟು ಮಾಡಿದ್ದಾರೆ ಎಂದು ಮೊಯಿತ್ರಾ ಟೀಕಿಸಿದ್ದರು.

ತಾನು ವಿಷಯಕ್ಕೆ ಸಂಬಂಧಿಸಿದ ಕಡತವನ್ನು ತನ್ನ ನಂತರ ಹಿರಿಯ ನ್ಯಾಯಾಧೀಶರಾಗಿದ್ದ ನ್ಯಾ.ಎಸ್.ಎ.ಬೊಬ್ಡೆ ಅವರಿಗೆ ಒಪ್ಪಿಸಿದ್ದೇನೆ ಮತ್ತು ಆಂತರಿಕ ವಿಧಿವಿಧಾನಗಳಿಗೆ ಅನುಗುಣವಾಗಿ ವಿಚಾರಣಾ ಸಮಿತಿಯೊಂದನ್ನು ರಚಿಸಲಾಗಿದೆ. ಹೀಗಾಗಿ ಮೊಯಿತ್ರಾರ ಹೇಳಿಕೆಗಳು ಸರಿಯಲ್ಲ ಎಂದರು.

ಸಿಜೆಐ ಆಗಿದ್ದಾಗ ತನ್ನ ನೇತೃತ್ವದಲ್ಲಿ ನಡೆದಿದ್ದ ಅಸ್ಸಾಂ ಎನ್‌ಆರ್‌ಸಿ ಪ್ರಕ್ರಿಯೆ ಕುರಿತಂತೆ ಗೊಗೊಯಿ,ಆ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ. ನ್ಯಾಯಾಲಯವು ತಾನು ಮಾಡಬಹುದಾದ್ದನ್ನು ಮಾಡಿದೆ. ಎನ್‌ಆರ್‌ಸಿ ಭವಿಷ್ಯದ ಕುರಿತ ದಾಖಲೆಯಾಗಿದೆ. ಅದನ್ನು ವಿಶ್ಲೇಷಿಸಿ ಅದರಲ್ಲೇನು ತಪ್ಪಿದೆ? ಅದನ್ನು ಅನುಷ್ಠಾನಿಸಿ ಎಂದರು.

ಮಾಧ್ಯಮಗಳಿಂದ ಬೆದರಿಕೆಗೆ ನ್ಯಾಯಾಧೀಶರು ಎಂದೂ ಮಣಿಯಬಾರದು ಎಂದ ಗೊಗೊಯಿ,ಕಚೇರಿಯಲ್ಲಿ ಅಥವಾ ಹೊರಗೆ ತನ್ನ ಮೇಲೆ ದಾಳಿ ನಡೆಯಬಹುದು ಎಂದು ಭಯಪಟ್ಟುಕೊಂಡರೆ ಅವರು ಕಾರ್ಯ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News