ವೈದ್ಯಕೀಯ ವ್ಯವಸ್ಥೆ ಗುಣಮಟ್ಟ ಹೆಚ್ಚಾಗಲಿ: ಡಾ.ಕಸ್ತೂರಿ ಮೋಹನ ಪೈ
ಮಂಗಳೂರು, ಫೆ.14: ಎಲ್ಲ ವೈದ್ಯಕೀಯ ಪದ್ದತಿಯನ್ನು ಒಂದು ಎಂಬುದಾಗಿ ಪರಿಗಣಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಇದರ ಜತೆಗೆ ವೈದ್ಯಕೀಯ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ. ಎಲ್ಲ ವೈದ್ಯ ಪದವಿಯ ಬದಲು ಇಂಡಿಯನ್ ಮೆಡಿಕಲ್ ಗ್ರಾಜ್ಯುವೇಶನ್ ನೀಡುವ ಕಾರ್ಯವಾಗಲಿ ಎಂದು ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ. ಕಸ್ತೂರಿ ಮೋಹನ ಪೈ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ನಡೆದ ‘ಆರೋಗ್ಯಕರ ಸಮಾಜ-ಸ್ವಾಸ್ಥಚಿಂತನೆ’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1950ರ ದಶಕದಲ್ಲಿ ಭಾರತೀಯರ ಸರಾಸರಿ ಆಯುಷ್ಯ 38 ವರ್ಷ ಆಗಿದ್ದುದು ಈಗ 69 ವರ್ಷಕ್ಕೆ ಏರಿಕೆಯಾಗಿದೆ. ಇದು ಸಮಸ್ತ ವೈದ್ಯಕೀಯ ಕ್ಷೇತ್ರದ ಸಾಧನೆಯಾಗಿದ್ದು ಹೆಮ್ಮೆ ಪಡಬೇಕಾದ ವಿಚಾರ. ಭಾರತೀಯರ ಆಯುಷ್ಯ ವೃದ್ಧಿಯಾಗಿರುವುದು ಎಲ್ಲ ವಿಧದ ವೈದ್ಯರಿಗೂ ಸಿಕ್ಕಿರುವ ಯಶಸ್ಸು ಆಗಿದೆ. ಯಾವುದೇ ವೈದ್ಯಕೀಯ ವಿಧಾನವೂ ಮೇಲಲ್ಲ, ಕೀಳಲ್ಲ, ದೇಶದ ಎಲ್ಲರ ಸ್ವಾಸ್ಥ ಕಾಪಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ. ವೈಜ್ಞಾನಿಕ ಚಿಂತನೆ ಎನ್ನುವುದು ಪುರಾತನ ಕಾಲದಿಂದಲ್ಲೂ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಚಿಂತನೆಗಳೇ ಸಿದ್ದಾಂತವಾಗಿ ರೂಪುಗೊಳ್ಳಬೇಕು ಎಂದು ಡಾ. ಕಸ್ತೂರಿ ಮೋಹನ ಪೈ ಅಭಿಪ್ರಾಯಪಟ್ಟರು.
ಆಯುರ್ವೇದ ತಜ್ಞ ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ಮುಖ್ಯಸ್ಥ ಡಾ.ಗಿರಿಧರ ಕಜೆ ಮಾತನಾಡಿ, ಆಯುರ್ವೇದವೆನ್ನುವುದು ಔಷಧ ಪದ್ಧತಿಯಲ್ಲ, ಅದು ಜೀವನ ಪದ್ಧತಿ, ಅದು ಆಲ್ಟರ್‌ನೇಟಿವ್ ಮೆಡಿಸಿನ್ ಬದಲು ನೇಟಿವ್ ಮೆಡಿಸಿನ್ ಅಥವಾ ನೆಲದ ಪದ್ಧತಿಯಾಗಿದೆ. ಮನೆಮದ್ದು ಎನ್ನುವುದು ಪರಂಪರೆಯಿಂದ ಬಂದ ಆಯುರ್ವೇದ ಪುಸ್ತಕದಿಂದಲೇ ಹುಟ್ಟಿಕೊಂಡ ತ್ವರಿತ ಚಿಕಿತ್ಸಾ ವಿಧಾನವೇ ಆಗಿದೆ ಎಂದರು.
ಹೃದ್ರೋಗ ತಜ್ಞ ಡಾ.ರಾಜೇಶ್ ಭಟ್ ಮಾತನಾಡಿ ಅಲೋಪಥಿ ವೈದ್ಯಕೀಯ ಪದ್ಧತಿಗೆ ಮಾಡರ್ನ್ ಮೆಡಿಸಿನ್ ಎಂಬ ಹೆಸರಿದೆ. ನಿರಂತರವಾಗಿ ಹೊಸತನ್ನು ಸೇರಿಸಿಕೊಂಡು, ಹಳೆಯ ಹಾಗೂ ಅಸಮರ್ಪಕ ವಿಚಾರಗಳನ್ನು ಕೈ ಬಿಡುತ್ತಾ ಹೋಗುವುದು, ಖಚಿತ, ನಿಖರವಾದ ಅಂಶಗಳ ಆಧಾರದಲ್ಲಿ ಕೆಲಸ ಮಾಡುತ್ತದೆ ಎಂದರು.
ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನ ಕುಮಾರ್ ಮಾತನಾಡಿ, ಹೋಮಿಯೊಪಥಿ ಎನ್ನುವುದು ದೇಹಪ್ರಕೃತಿ, ಸ್ವಭಾವವೈಚಿತ್ರದ ಆಧಾರದಲ್ಲಿ ಚಿಕಿತ್ಸೆ ನೀಡುವ ಪದ್ಧತಿಯಾಗಿದ್ದು ವ್ಯಕ್ತಿತ್ವಕ್ಕೆ ಸರಿಹೊಂದುವ ಚಿಕಿತ್ಸೆ ನೀಡಲಾಗುತ್ತದೆ. ಪೂರಕ ಪದ್ಧತಿಯಾಗಿದ್ದು ರೋಗಿಯ ಸಮಸ್ಯೆಗೆ ಚಿಕಿತ್ಸೆ ಸಾಧ್ಯವಿದ್ದರೆ ಮಾತ್ರವೇ ತೆಗೆದುಕೊಂಡು, ಇಲ್ಲವಾದರೆ ಸೂಕ್ತ ವೈದ್ಯರಿಗೆ ಶಿಾರಸು ಮಾಡಲಾಗುತ್ತದೆ. ಜರ್ಮನಿಯಲ್ಲಿ 225 ವರ್ಷಗಳ ಹಿಂದೆ ಹುಟ್ಟಿದರೂ ಈಗ ಭಾರತದ ಪದ್ಧತಿಯಾಗಿ ಬೆಳೆದುಬಂದಿದೆ ಎಂದರು.
ದಂತವೈದ್ಯ ಡಾ.ಮುರಲೀಮೋಹನ ಚೂಂತಾರು ಮಾತನಾಡಿ ಹಿಂದೆ ಕೇವಲ ಹಲ್ಲು ಕೀಳುವವರಾಗಿದ್ದ ದಂತ ವೈದ್ಯರಿಗೆ ಈಗ ಬಾಯಿಯ ವೀಕ್ಷಣೆ ಮೂಲಕ 100ಕ್ಕೂ ಹೆಚ್ಚು ರೋಗ ಪತ್ತೆ ಮಾಡುವ ಜವಾಬ್ದಾರಿ ಇದೆ. ಆ ಮೂಲಕ ರಕ್ತಕ್ಯಾನ್ಸರ್‌ನಂತಹ ಮಾರಕ ರೋಗವನ್ನು ಮೊದಲೇ ಪತ್ತೆ ಮಾಡಿ, ಜೀವವುಳಿಸುವುದು ಸಾಧ್ಯವಾಗುತ್ತದೆ ಎಂದರು.
ಶಾರದಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್ ಪಾದೆಕಲ್ಲು ದೇಹಪ್ರಕೃತಿಯ ವಿರುದ್ಧ ಮನುಷ್ಯರು ಹೋಗುತ್ತಿರುವುದೇ ರೋಗಗಳಿಗೆ ಕಾರಣ, ಪ್ರಕೃತಿಯ ಜೊತೆಗೆ ಹೋದರೆ ಮಾತ್ರವೇ ಅದನ್ನು ಗುಣಪಡಿಸುವುದು ಸಾಧ್ಯ. ಸಮತೋಲಿತ ಆಹಾರ, ಜಲಚಿಕಿತ್ಸೆ ಇತ್ಯಾದಿಗಳಿಂದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಮತೋಲನ ಸಾಧಿಸಬಹುದು ಎಂದು ಹೇಳಿದರು.
ಮಹೇಶ್ ಮೂರ್ತಿ ಸುರತ್ಕಲ್ ಸ್ವಾಗತಿಸಿದರು. ಡಾ.ಸಂದೀಪ್ ಬೇಕಲ್ ನಿರ್ವಹಿಸಿದರು. ಪಶುಪತಿ ಉಳ್ಳಾಲ ವಂದಿಸಿದರು.