×
Ad

ಭಾಷಾ ಪ್ರೀತಿಯಿಂದ ಜ್ಞಾನಾರ್ಜನೆ ಸಾಧ್ಯ: ಡಾ.ಪಿ.ಎಸ್. ಎಡಪಡಿತ್ತಾಯ

Update: 2021-02-14 19:57 IST

ಮಂಗಳೂರು, ಫೆ.14: ಭಾಷೆ ಆಪ್ತ ಮತ್ತು ಸುಪ್ತವಾಗಿದ್ದರೆ ಮನಸ್ಸಿಗೆ ಮುಟ್ಟುತ್ತದೆ. ವಿದ್ಯಾರ್ಥಿಗಳು ಭಾಷೆಯನ್ನು ಪ್ರೀತಿಸಿದರೆ ಮಾತ್ರ ಜ್ಞಾನಾರ್ಜನೆಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಎಡಪಡಿತ್ತಾಯ ಹೇಳಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಕವೊಂದೇ ವಿದ್ಯಾರ್ಥಿಗಳಿಗೆ ಮಾನದಂಡವಲ್ಲ. ಉದ್ಯೋಗಕ್ಕೆ ಸೇರಿ ಯಶಸ್ಸು ಪಡೆಯಬೇಕಾದರೆ ಅಂಕದ ಜೊತೆ ಪ್ರಾಯೋಗಿಕ ಜ್ಞಾನವೂ ಮುಖ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬರ ಮನಸ್ಥಿತಿ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದಿ ಅರ್ಥೈಸಿಕೊಳ್ಳಬೇಕು. ಬಳಿಕ ಅದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಡಾ.ಪಿ.ಎಸ್. ಎಡಪಡಿತ್ತಾಯ ಕರೆ ನೀಡಿದರು.

ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಕುಮಾರಸ್ವಾಮಿ ಎಚ್. ಮಾತನಾಡಿ, ನೂತನ ಶಿಕ್ಷಣ ನೀತಿಯಲ್ಲಿ ಭಾಷೆಯ ಕಲಿಕೆ, ಬಹುಭಾಷಿಕತೆ ಮತ್ತು ಭಾಷೆಯ ಶಕ್ತಿಯ ಬಗ್ಗೆ ವಿವರಣೆ ಇದೆ. ದ.ಕ. ಜಿಲ್ಲೆಯಲ್ಲಿ ಭಾಷೆಯನ್ನು ಮಾತೃಭಾಷೆ ಮತ್ತು ಮನೆ ಭಾಷೆ ಹಾಗೂ ಸ್ಥಳೀಯ ಭಾಷೆ ಎಂದು ವಿಂಗಡಣೆ ಮಾಡಬಹುದು. ಶಾಲೆಯ ಭಾಷೆಗೂ ಊರಿನ ಭಾಷೆಗೂ ವ್ಯತ್ಯಾಸ ಇರುತ್ತದೆ. ಶಾಲೆಯಲ್ಲಿ ಔಪಚಾರಿಕ ಭಾಷೆಯಾಗಿದೆ. ಎಲ್ಲವನ್ನೂ ಪರಿಗಣಿಸುವ ಚಿಂತನೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಯಾವುದೇ ವಿಷಯದಲ್ಲಿ ಜ್ಞಾನವೃದ್ಧಿಯಾಗಬೇಕಾದರೆ ಭಾಷೆಯ ಬಗ್ಗೆ ಆಳವಾದ ಅಧ್ಯಯನ ಮುಖ್ಯ. ಜ್ಞಾನ ಸೃಷ್ಟಿ ಭಾಷೆಯಾಗಿ ಕನ್ನಡ ಬೆಳೆಯಬೇಕು ಎಂದರು.

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಪ್ರಾಧ್ಯಾಪಕಿ ಡಾ.ಆಶಾಲತಾ ಮಾತನಾಡಿ, ಶಿಕ್ಷಣ ವ್ಯಾಪಾರವಲ್ಲ. ಸಾರ್ವಜನಿಕ ಸೇವೆಯಾಗಿದೆ. ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು. ಅದನ್ನು ದೊರಕುವಂತೆ ಮಾಡುವುದು ಸರಕಾರದ ಕರ್ತವ್ಯ. ಆರ್ಥಿಕ ಉದಾರಿಕರಣದ ಸವಾಲು ನಿರ್ವಹಿಸಿದ ವಿಧಾನವನ್ನು ಆಧರಿಸಿದ ಹೊಸ ಶಿಕ್ಷಣ ನೀತಿಯನ್ನು ವಿಶ್ಲೇಷಣೆ ಮಾಡಬೇಕಿದೆ ಎಂದರು.

ಮಣಿಪಾಲದ ಎಂಐಟಿ ಪ್ರಾಧ್ಯಾಪಕ ಕರುಣಾಕರ ಕೋಟೆಕಾರ್ ಮಾತನಾಡಿ, ಯಾವಾಗ ಭಾರತೀಯತೆಯ ಶಿಕ್ಷಣಕ್ಕೆ ನಾವು ಒತ್ತು ನೀಡುವುದಿಲ್ಲವೋ ಆವರೆಗೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ನೂತನ ಶಿಕ್ಷಣ ನೀತಿಯ ಪ್ರಕಾರ 6ನೇ ತರಗತಿಯಿಂದ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಹಿರಿಯ ಕಂಪ್ಯೂಟರ್ ತಜ್ಞ ಕೆ.ಪಿ. ರಾವ್, ಸಮ್ಮೇಳನಾಧ್ಯಕ್ಷ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು. ಸುಮನಾ ಘಾಟೆ ಬರೆದಿರುವ ‘ಭಾವಕೋಶ’ ಕವನ ಸಂಕಲನವನ್ನು ಡಾ. ಎಂ. ಮೋಹನ್ ಆಳ್ವ ಬಿಡುಗಡೆಗೊಳಿಸಿದರು. ಪ್ರೊ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಬೆಳಾಲು ವಂದಿಸಿದರು. ಡಾ. ಪ್ರಕಾಶ್ಚಂದ್ರ ಶಿಶಿಲ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News