ಉಡುಪಿ: ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ
ಉಡುಪಿ, ಫೆ.14: ಉಡುಪಿ ರಂಗಭೂಮಿ ವತಿಯಿಂದ 41ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು.
ಪ್ರಶಸ್ತಿ ಪ್ರದಾನ ಮಾಡಿದ ಕಟೀಲು ಅನುಮಂಶೀಯ ಮೊಕ್ತೇಸರ ವಿದ್ವಾನ್ ಹರಿನಾರಾಯಣ ಅಸ್ರಣ್ಣ ಕಟೀಲು ಮಾತನಾಡಿ, ರಂಗ ಎಂಬುದು ಮನಸ್ಸಿಗೆ ಸಂತೋಷ ಕೊಡುವ ಕ್ಷೇತ್ರವಾಗಿದೆ. ಆದರೆ ಇಂದಿನ ಚಲನಚಿತ್ರದ ಅವಸ್ಥೆಯೇ ರಂಗಭೂಮಿಗೂ ಬರುತ್ತಿದೆ. ನಾಟಕವು ಕೇವಲ ಸಂತೋಷ ನೀಡುವುದು ಮಾತ್ರವಲ್ಲ, ಪ್ರೇಕ್ಷಕರ ಮನಸ್ಸನ್ನು ಸ್ವಸ್ಥವಾಗಿ ಯೋಜನೆ ಮಾಡುವಂತೆ ಮಾಡಬೇಕು. ಆಗ ರಂಗಕಲೆಗೆ ಸಾರ್ಥಕತೆ ಬರಲು ಸಾಧ್ಯ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ರಂಗಕರ್ಮಿ ಗಿರೀಶ್ ಬೈಂದೂರು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವದಾಸ್ ನಾಯ್ಕಾ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆ ಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ರಂಗ ಭೂಮಿ ಉಪಾಧ್ಯಕ್ಷ ಎಂ.ನಂದಕುಮಾರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಪರ್ಧೆಯ ಬಹುಮಾನ ವಿಜೇತ ಸಮಷ್ಠಿ ಬೆಂಗಳೂರು ತಂಡದ ‘ಕಂತು’ ನಾಟಕ ಮರು ಪ್ರದರ್ಶನಗೊಂಡಿತು.